ಹೂವಿನಹಳ್ಳಿ ಶ್ರೀ ರಾಚೋಟಿ ವೀರಭದ್ರಸ್ವಾಮಿ ರಥೋತ್ಸವ ನೆರವೇರಿತು. 
ನ್ಯೂಸ್

ಹೂವಿನಹಳ್ಳಿಯಲ್ಲಿ ದುಗ್ಗಳ ಸೇವೆ

ಬೀರೂರು: ಹೂವಿನಹಳ್ಳಿ ಗ್ರಾಮದಲ್ಲಿ ಶ್ರೀ ರಾಚೋಟಿ ವೀರಭದ್ರಸ್ವಾಮಿ ರಥೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.

ಶ್ರೀ ಸ್ವಾಮಿಗೆ ಮದುವಣೆಗೆ ಶಾಸ, ವೃಷಭ ವಾಹನ, ನಂದಿ ಉತ್ಸವ, ನವಿಲೋತ್ಸವ, ಗಜೋತ್ಸವ, ಅಶ್ವತೋತ್ಸವ, ಸರ್ಪೋತ್ಸವ ಹಾಗೂ ಶುಕ್ರವಾರ ಸಂಜೆ ಶ್ರೀ ವೀರಭದ್ರಸ್ವಾಮಿ ಮತ್ತು ಭದ್ರಕಾಳಿ ದೇವಿಗೂ ಕಲ್ಯಾಣ ಮಹೋತ್ಸವ ನಡೆಯಿತು. ಶನಿವಾರ ಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಮತ್ತು ಪುಷ್ಪಾಲಂಕಾರ ನೆರವೇರಿಸಿ ಉತ್ಸವ ಮೂರ್ತಿಯನ್ನು ರಥದಲ್ಲಿ ಸ್ಥಾಪಿಸಲಾಯಿತು. ನಂತರ ಮಹಿಳೆಯರಿಂದ ದುಗ್ಗಳ ಸೇವೆ, ಪ್ರಸಕ್ತ ವರ್ಷದ ಬಾವುಟ ಹರಾಜು ನಡೆಯಿತು. ಈ ಬಾರಿ ಅಜ್ಜಂಪುರದ ಅಸುಂಡಿ ಗ್ರಾಮದ ನಾಗರಾಜು 1.50 ಲಕ್ಷಕ್ಕೆ ರೂ. ಬಿಡ್‌ನಲ್ಲಿ ಪಡೆದು ಮೊದಲ ಪೂಜೆಗೆ ಭಾಜನರಾದರು.

ತಾವರೆಕೆರೆ ಶಿಲಾಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಸಿದ್ದಗಂಗ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಗುರು ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೀರೂರು ಖಾಸಾಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭಕ್ತರು ಶ್ರೀ ರಾಚೋಟಿ ವೀರಭದ್ರಸ್ವಾಮಿಗೆ ಘೋಷಣೆ ಕೂಗುತ್ತ ಬಾಳೆಹಣ್ಣು, ನಿಂಬೆಹಣ್ಣನ್ನು ರಥಕ್ಕೆ ಎಸೆದು ಭಕ್ತಿ ಮೆರೆದರು. ಸಂಜೆ ಬಳ್ಳಿಗನೂರು ಗ್ರಾಮದ ರಾಜಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಭಾನುವಾರ ಅವಭೃತ ಸ್ನಾನ ಮತ್ತು ಕಂಕಣ ವಿಸರ್ಜನೆಯೊಂದಿಗೆ ರಥೋತ್ಸವಕ್ಕೆ ತೆರೆ ಬೀಳಲಿದೆ.