ನ್ಯೂಸ್

ಹುಲ್ಲಿನ ಬಣವೆಗಳಿಗೆ ಬೆಂಕಿ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ದೇವಾಲಯ ಸಮೀಪ ರೈತರು ಮೆದೆ ಹಾಕಿದ್ದ ಹುಲ್ಲಿನ ಬಣವೆಗಳಿಗೆ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು, ಬಣವೆಗಳು ಸುಟ್ಟು ಭಸ್ಮವಾಗಿದೆ.

ತಾಲೂಕಿನ ಬಳ್ಳೆಕೆರೆ ಗ್ರಾಮ ಹೊರವಲಯದ ಹುಚ್ಚುರಾಯಸ್ವಾಮಿ ದೇವಾಲಯ ಮುಂಭಾಗದಲ್ಲಿ ಹಾಕಿದ್ದ 6 ಮೆದೆ ಹಾಗೂ ದೇಗುಲ ಸಮೀಪದ ಜಮೀನಿನಲ್ಲಿ ಹಾಕಿದ್ದ 2 ಮೆದೆ ಹುಲ್ಲಿನ ಬಣವೆಗಳಿಗೆ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಧ್ಯರಾತ್ರಿ 2 ರ ವೇಳೆ ಬೆಂಕಿ ಹಚ್ಚಿದ್ದಾರೆ.

ಜಮೀನಿನನ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಗ್ರಾಮದ ಪರಂಗಿ ಗೋಪಾಲ್ ಹಾಗೂ ಆಚಾರ್ ಪುಟ್ಟಸ್ವಾಮಿ ಅವರು ಬೆಂಕಿ ಹೊತ್ತಿರುವುದನ್ನು ಕಂಡು ತಕ್ಷಣ ಕೂಗಿಕೊಂಡು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ಬೆಂಕಿಯ ಕೆನ್ನಾಲಿಗೆಯ ಜ್ವಾಲೆಯಲ್ಲಿ ಹುಲ್ಲು ಧಗಧಗನೇ ಹೊತ್ತು ಉರಿದಿದ್ದು, ಅಗ್ನಿಶಾಮಕ ದಳದ 2 ವಾಹನಗಳು ಮಧ್ಯರಾತ್ರಿ 3 ಗಂಟೆಯಿಂದ ಮುಂಜಾನೆವರೆಗೂ ಬೆಂಕಿ ನಂದಿಸಿದ್ದಾರೆ.

ಗ್ರಾಮದ ನಾಲ್ವರು ರೈತರಾದ ಮಣಿಯಮ್ಮ, ಬಿ.ಸಿ.ಚಂದ್ರಶೇಖರ್, ಗೋವಿಂದರಾಜು, ರಾಕೇಶ್, ಶ್ರೀನಿವಾಸ್, ಜಗದೀಶ್ ಎಂಬುವರು ತಮ್ಮ ಜಾನುವಾರುಗಳ ಮೇವಿಗಾಗಿ ಒಣ ಹುಲ್ಲಿನ ಒಟ್ಟು 8 ಬಣವೆಗಳನ್ನು ಮೆದೆ ಹಾಕಿದ್ದರು. ಇದೀಗ ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಗ್ರಾಮಲೆಕ್ಕಿಗರು, ರಾಜಸ್ವ ನೀರಿಕ್ಷಕರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.