ಹನಗೋಡು: ಬೀರತಮ್ಮನಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಬೀರತಮ್ಮನಹಳ್ಳಿ ಮೀಸಲು ಅರಣ್ಯದಂಚಿನ ಬಿ.ಆರ್.ಕಾವಲು ಗ್ರಾಮದ ರವಿ ಅವರಿಗೆ ಸೇರಿದ ಹಸುವನ್ನು ಸೋಮವಾರ ಹನಗೋಡಿನ ಸೋಮಪ್ಪ ಅವರ ಜಮೀನಿನಲ್ಲಿ ಮೇಯಲು ಬಿಡಲಾಗಿತ್ತು. ಈ ವೇಳೆ ಬೀರತಮ್ಮನಹಳ್ಳಿ ಮೀಸಲು ಅರಣ್ಯದಿಂದ ಬಂದ ಹುಲಿ ಹಸುವಿನ ಮೇಲೆ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿತ್ತು. ಹುಲಿ ದಾಳಿಯನ್ನು ಕಣ್ಣಾರೆ ಕಂಡು ಹೆದರಿದ ರವಿ ಹಾಗೂ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಗಾಟ ನಡೆಸಿದ್ದಾರೆ. ಜನರ ಚೀರಾಟದಿಂದ ಹುಲಿ ಗಾಬರಿಗೊಂಡು ಮತ್ತೆ ಕಾಡಿನತ್ತ ಓಡಿ ಹೊಯಿತೆಂದು ಹಸುವಿನ ಮಾಲೀಕ ರವಿ ತಿಳಿಸಿದ್ದಾರೆ. ಅರಣ್ಯ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಗ್ರಾಮಸ್ಥರ ಅಕ್ರೋಶ: ಒಂದು ವಾರದ ಹಿಂದೆಯಷ್ಟೇ ರವಿಗೆ ಸೇರಿದ ಇನ್ನೊಂದು ಹಸುವನ್ನು ಇದೇ ಜಮೀನಿನಲ್ಲಿ ಹುಲಿ ಕೊಂದು ಹಾಕಿತ್ತು. ಇದು ಹುಲಿ ದಾಳಿಯಲ್ಲ ಚಿರತೆ ದಾಳಿ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಜನರಿಗೆ ತಪ್ಪು ಮಾಹಿತಿ ನೀಡಿದ್ದರು. ಚಿರತೆ ಸೆರೆಗೆ ಬೋನು ಇಡುವುದಾಗಿ ತಿಳಿಸಿದ್ದರು. ಆದರೆ ಈಗ ಅದೇ ಹುಲಿ ಮತ್ತೊಂದು ಹಸುವನ್ನು ಕೊಂದಿದೆ. ರವಿ ಎರಡು ಹಸುಗಳನ್ನು ಕಳೆದುಕೊಂಡು ಸಂಕಷ್ಟಕ್ಕಿಡಾಗಿದ್ದು, ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೋನು ಇಟ್ಟು ಸೆರೆಗೆ ಕ್ರಮವಹಿಸಿ: ಈ ಭಾಗದಲ್ಲಿ ಆಗಿದ್ದಾಂಗ್ಗೆ ಹುಲಿ, ಚಿರತೆಗಳು ಜಾನುವಾರುಗಳ ಮೇಲೆ ದಾಳಿ ನಡೆಸಿ ಕಾಡಂಚಿನ ಜನರನ್ನು ಭಯಭೀತಗೊಳಿಸುತ್ತಿವೆ. ಈ ಭಾಗದಲ್ಲಿ ಗಿರಿಜನ ಹಾಡಿಗಳು ಸೇರಿದಂತೆ ಹತ್ತಾರು ಗ್ರಾಮ ಹಾಗೂ ಹಾಡಿಗಳಿದ್ದು, ನಿತ್ಯ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಇದೆ ಮಾರ್ಗವಾಗಿ ನಡೆದುಕೊಂಡು ಹೋಗಬೇಕಾಗಿದೆ. ಹುಲಿಯ ಭಯದಿಂದ ಜನರು ಓಡಾಡಲು ಹೆದರುತ್ತಿದ್ದು, ಹುಲಿ ಸೆರೆಗೆ ಶೀಘ್ರವೇ ಬೋನು ಇಡಬೇಕು ಎಂದು ಹನಗೋಡಿನ ಯುವ ಮುಖಂಡ ಸುಮೇಶ್ ಸೋಮಪ್ಪ ಒತ್ತಾಯಿಸಿದ್ದಾರೆ.