ನಗರದ ಮೈಸೂರು-ಬನ್ನೂರು ರಸ್ತೆಯ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ‘ಆತ್ಮೀಯ-2ಕೆ25’ ಅನ್ನು ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷವೂ ಸಮಾಜದಲ್ಲಿನ ಆಶಕ್ತರು, ವಿಶೇಷಚೇತನರು, ಹುತಾತ್ಮ ಸೈನಿಕ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ವರ್ಷವೂ ಅವಶ್ಯ ಇರುವ ಮೂವರು ವಿಶೇಷಚೇತನರನ್ನು ಗುರ್ತಿಸಿ ಧನಸಹಾಯ ಮಾಡಲಾಯಿತು.
ಜಿಲ್ಲಾ ವಿಶೇಷಚೇತನ ಮತ್ತು ಅಂಗವಿಕಲ ಕಲ್ಯಾಣಾಧಿಕಾರಿ ಶಂಕರಗೌಡ ಪಾಟೀಲ್, ಸಮಾಜ ಸೇವಕ ಹಾಗೂ ರಾಜ್ಯ ಅಂಗವಿಕಲರ ಸಂಘದ ಉಪಾಧ್ಯಕ್ಷ ಶ್ರೀಧರ ದೀಕ್ಷಿತ್ ಹಾಗೂ ಉದಯೋನ್ಮುಖ ಕನ್ನಡ ಚಿತ್ರನಟ, ಕಾಲೇಜಿನ ಹಳೇ ವಿದ್ಯಾರ್ಥಿ ವಿರಾಟ್ ಕಾರ್ಯಕ್ರಮ ಉದ್ಘಾಟಿಸಿದರು.
ಶಂಕರಗೌಡ ಪಾಟೀಲ್ ಮಾತನಾಡಿ, ಸಾಮಾಜಿಕ ಕಳಿಕಳಿ ಇಟ್ಟುಕೊಂಡು ಮಾಡುತ್ತಿರುವ ವಾರ್ಷಿಕೋತ್ಸವ ಆಚರಣೆ ಮಾದರಿ. ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಂತರೇ ಸಮಾಜದಲ್ಲಿ ತಮ್ಮ ನಿತ್ಯದ ಜೀವನ ಸಾಗಿಸಲು ಕಷ್ಟಪಡುತ್ತಿರುವ ದಿನಗಳಲ್ಲಿ ಅಂಗವಿಕಲರು ಬದುಕು ಸಾಗಿಸಲು ಕಷ್ಟವಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಸಮಾಜದಲ್ಲಿನ ದೀನ ದುರ್ಬಲರನ್ನು ಗುರ್ತಿಸಿ ತನ್ನ ಕೈಲಾದ ಸಹಾಯ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಶ್ರೀಧರ ದೀಕ್ಷೀತ್ ಮಾತನಾಡಿ, ವಿಶೇಷಚೇತನರು ಮತ್ತು ಅಂಗವಿಕಲರು ಆತ್ಮ ಸ್ಥೈರ್ಯದಿಂದ ಬದುಕಬೇಕು, ಜಗತ್ತಿನಲ್ಲಿ ಅನೇಕ ವಿಶೇಷಚೇತನರು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದರು.
ಇದೇ ವೇಳೆ ನಾಗಭೂಷಣ ಅನಾಥಶ್ರಮದ ವಿಶೇಷಚೇತನ ಒಂಟಿಕೊಪ್ಪಲು ರವಿ ಅವರಿಗೆ ಎಟಿಎಂಇ ಆಡಳಿತ ಮಂಡಳಿ ಅಧ್ಯಕ ಎಲ್.ಅರುಣ್ ಕುಮಾರ್ ಮತ್ತು ಪದಾಧಿಕಾರಿಗಳು ನೆರವಿನ ಚೆಕ್‌ನೀಡಿದರು.
ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಶಿವಶಂಕರ್, ಖಜಾಂಚಿ ಆರ್.ವೀರೇಶ್, ಟ್ರಸ್ಟಿ ಎಚ್.ವೆಂಕಟೇಶ್, ಆಡಳಿತಾಧಿಕಾರಿ ಡಾ.ಸಚ್ಚಿದಾನಂದಮೂರ್ತಿ, ಪ್ರಾಂಶುಪಾಲ ಡಾ.ಎಲ್.ಬಸವರಾಜ್, ಡೀನ್ ಡಾ.ಕೆ.ಶ್ರೀನಿವಾಸ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಡಾ. ಪುಟ್ಟೇಗೌಡ ಇತರರಿದ್ದರು.