ಹುಣಸೂರು: ಪಟ್ಟಣದ ಸಂತೆಮಾಳದಲ್ಲಿರುವ ನಗರಸಭೆ ಮಳಿಗೆಗಳಿಗೆ ಗುರುವಾರ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರಸಭೆ ಅಧಿಕಾರಿಗಳೊಂದಿಗೆ ಸಂತೆಮಾಳಕ್ಕೆ ಭೇಟಿ ನೀಡಿದ ಅವರು ತರಕಾರಿ ಮಾರುಕಟ್ಟೆ, ಮಾಂಸದಂಗಡಿಗಳನ್ನು ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ನಗರಸಭೆ ಅಧಿಕಾರಿಗಳಿಂದ ಮಳಿಗೆಗಳ ಕುರಿತು ಮಾಹಿತಿ ಪಡೆದರು.
2022ರ ಫೆಬ್ರವರಿಯಲ್ಲಿ ನಗರಸಭೆಯಿಂದ 103 ಮಳಿಗೆಗಳ ಬಹಿರಂಗ ಹರಾಜು ನಡೆದಿದ್ದು, ಹರಾಜು ಕುರಿತಂತೆ ಕೆಲ ಮಳಿಗೆದಾರರು ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ತಮಗೆ ಕೆಲ ಸಂಗತಿಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಅದರಂತೆ 103 ಮಳಿಗೆಗಳ ಪ್ರಸ್ತುತ ಪರಿಸ್ಥಿತಿ ಹೇಗಿದೆ? ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆಯೇ? ಎಷ್ಟು ಮಳಿಗೆಗಳು ಬೀಗ ಹಾಕಲ್ಪಟ್ಟಿವೆ. ಬೀಗ ಹಾಕಿದ್ದರೆ ಅದು ದೂರುದಾರರಿಂದಲೋ ಅಥವಾ ನಗರಸಭೆಯಿಂದ ಹಾಕಲಾಗಿದೆಯೇ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಿ ಸ್ಥಳ ಪರಿಶೀಲನೆ ಕುರಿತು ವಿಡಿಯೋ ಮತ್ತು ಫೋಟೋಗಳನ್ನು ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ. ಹೀಗಾಗಿ ನಗರಸಭೆ ಅಧಿಕಾರಿಗಳು ಮತ್ತು ವಕೀಲರೊಂದಿಗೆ ಪರಿಶೀಲನೆ ನಡೆಸಿದ್ದು, ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದೆಂದು ತಿಳಿಸಿದರು.
ಪ್ರಾಂಗಣದಲ್ಲಿನ ಮೂಲಸೌಕರ್ಯಗಳ ಕೊರತೆ, ಬಾಡಿಗೆ ನವೀಕರಣ ಮುಂತಾದವುಗಳ ಕುರಿತ ಸಮಸ್ಯೆಗಳನ್ನು ಹಲವು ವರ್ತಕರು ಅವಲತ್ತುಕೊಂಡರು. ನಗರಸಭಾ ಸದಸ್ಯರಾದ ಕೃಷ್ಣರಾಜ ಗುಪ್ತಾ, ಸತೀಶ್‌ಕುಮಾರ್, ಜಿಲ್ಲಾ ಯೋಜನಾ ನಿರ್ದೇಶಕಿ ಶೋಭಾ, ಪೌರಾಯುಕ್ತೆ ಕೆ.ಎಂ.ಮಾನಸ, ಇಇ ನರಸು ಕಲಾಂತರೆ, ಎಇಇ ಶರ್ಮಿಳಾ, ಪರಿಸರ ಇಂಜಿನಿಯರ್ ಎಲ್.ರೂಪಾ, ವಕೀಲ ನಂದನ್, ನಗರಠಾಣೆ ಇನ್ಸ್‌ಪೆಕ್ಟರ್ ದೇವೇಂದ್ರಪ್ಪ ಇತರರು ಇದ್ದರು.