ಹುಣಸೂರು: ಪಟ್ಟಣದಲ್ಲಿ ಡಿ.7ರಂದು ಆಯೋಜಿಸಿರುವ ಹನುಮ ಜಯಂತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರಿಂದ ಪಥ ಸಂಚಲನ ನಡೆಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾರ್ಗದರ್ಶನದಂತೆ ನಾಗರಿಕರಿಗೆ ನೈತಿಕ ಧೈರ್ಯ ತುಂಬುವ ನಿಟ್ಟಿನಲ್ಲಿ ಗುರುವಾರ ನಗರದ ಡಿವೈಎಸ್‌ಪಿ ಕಚೇರಿ ಆವರಣದಿಂದ ಆಯೋಜಿಸಿದ್ದ ಪಥ ಸಂಚಲನ, ಸಂವಿಧಾನ ವೃತ್ತ, ಗೋಕುಲ ರಸ್ತೆ, ಬೈಪಾಸ್ ರಸ್ತೆ, ಶಬ್ಬೀರ್ ನಗರದಲ್ಲಿ ಸಾಗಿ, ಕಲ್ಪತರು ವೃತ್ತ, ಸರಸ್ವತಿಪುರಂ ಬಡಾವಣೆ, ವಿಶ್ವೇಶ್ವರಯ್ಯ ವೃತ್ತ, ಗಣೇಶನ ಗುಡಿ ಬೀದಿ, ಎಚ್.ಡಿ.ಕೋಟೆ ವೃತ್ತ ತಲುಪಿತು. ಅಲ್ಲಿಂದ ಜೆಎಲ್‌ಬಿ ರಸ್ತೆ, ಬಜಾರ್ ರಸ್ತೆಯ ಮೂಲಕ ಡಿವೈಎಸ್‌ಪಿ ಕಚೇರಿಗೆ ಮರಳಿತು.
ಡಿವೈಎಸ್‌ಪಿ ರವಿಪ್ರಸಾದ್ ಮಾತನಾಡಿ, ಸಾರ್ವಜನಿಕರು ಯಾವುದೇ ಭಯ, ಗೊಂದಲಗಳಿಲ್ಲದೆ ಹನುಮ ಜಯಂತಿ ಆಚರಿಸಬೇಕೆನ್ನುವ ಉದ್ದೇಶದಿಂದ ಪಥ ಸಂಚಲನ ಕೈಗೊಳ್ಳಲಾಗಿದೆ ಎಂದರು. ಇನ್ಸ್‌ಪೆಕ್ಟರ್‌ಗಳಾದ ಎಲ್.ಶ್ರೀನಿವಾಸ್, ರವಿ, ಚಿಕ್ಕಸ್ವಾಮಿ ಇತರರು ಇದ್ದರು.