ನ್ಯೂಸ್

ಹುಣಸೂರನ್ನು ಮಾದರಿ ಕ್ಷೇತ್ರವನ್ನಾಗಿಸುವೆ

ಹುಣಸೂರು: ರಾಜ್ಯದಲ್ಲಿಯೇ ಹುಣಸೂರು ತಾಲೂಕನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಇದೆ ಎಂದು ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ಮನವಿ ಮಾಡಿದರು.
ಗುರುವಾರ ತಾಲೂಕಿನ ಗೋವಿಂದನಹಳ್ಳಿ ಮತ್ತು ಉಯಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ರೋಡ್‌ಶೋ ಮೂಲಕ ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ತಾಲೂಕಿನ ಜ್ವಲಂತ ಸಮಸ್ಯೆಗಳೇನು? ಕಳೆದ 15 ವರ್ಷಗಳ ಆಡಳಿತದ ದುರಂತಗಳೇನೂ ಎನ್ನುವ ಎಲ್ಲ ವಿಷಯಗಳನ್ನು ಅರಿತಿದ್ದೇನೆ. ಹುಣಸೂರು ನನಗೇನೂ ಹೊಸ ಊರಲ್ಲ. ತಾಲೂಕಿನ ಜನರ ಭಾವನೆಗಳನ್ನು, ನಿರೀಕ್ಷೆಗಳನ್ನು ಈಗಾಗಲೇ ಅರಿತಿದ್ದೇನೆ. ನನ್ನನ್ನು ಗೆಲ್ಲಿಸಿಕೊಡಿ. ನಿಮ್ಮ ಭಾವನೆಗಳಿಗೆ ಧಕ್ಕೆ ಬಾರದಂತೆ ಕರ್ತವ್ಯ ನಿರ್ವಹಿಸುತ್ತೇನೆ. ಸರ್ವರ ಅಭಿವೃದ್ಧಿಯ ಮಂತ್ರದೊಂದಿಗೆ ನಿಮ್ಮಲ್ಲಿ ನಿಮ್ಮವನಾಗಿರುತ್ತೇನೆಂದು ಭರವಸೆ ನೀಡಿದರು.


ಗೋವಿಂದನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಳೆ ಹುಣಸೂರಿನಿಂದ ಆರಂಭಗೊಂಡ ರೋಡ್ ಶೋಗೆ ಜನಸಾಗರವು ಹರೀಶ್‌ಗೌಡರನ್ನು ಪಟಾಕಿ ಸಿಡಿಸಿ, ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಿತು. ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ್ ಒಡೆಯರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಟಿ.ರಾಜಣ್ಣ, ನಗರ ಅಧ್ಯಕ್ಷ ಎಚ್. ಎಂ. ಫಜಲುಲ್ಲಾ, ಒಕ್ಕಲಿಗರ ಸಂಘದ ಅಧ್ಯಕ್ಷ ಗಣೇಶ್‌ಗೌಡ, ಉದ್ಯಮಿ ಹೊಸೂರು ಅಣ್ಣಯ್ಯ, ರವಿಕುಮಾರ್, ಚಿಕ್ಕಹುಣಸೂರು ನಿಂಗರಾಜು ಇತರರು ಹಾಜರಿದ್ದರು.