ಅರಕಲಗೂಡು: ಅರುಣಾಚಲ ಪ್ರದೇಶದ ಬಳಿ ಕರ್ತವ್ಯ ನಿರತರಾಗಿದ್ದ ವೇಳೆ ಗುಡ್ಡಕುಸಿದು ಮೃತಪಟ್ಟ ತಾಲೂಕಿನ ಅತ್ನಿ ಸಿದ್ದಾಪುರ ಗ್ರಾಮದ ಹುತಾತ್ಮ ಯೋಧ ಮಲ್ಲೇಶ್ ಅವರ ಅಂತ್ಯಕ್ರಿಯೆ ಬುಧವಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಜುಲೈ 8ರಂದು ಯೋಧ ಮಲ್ಲೇಶ್ ಹುಟ್ಟಿದ ದಿನವಾಗಿದ್ದು ದೇಶಕ್ಕಾಗಿ ಪ್ರಾಣತೆತ್ತು ಇಂದೇ ಭೂ ತಾಯಿ ಒಡಲು ಸೇರಿದರು.
ಬೆಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ತಾಲೂಕಿಗೆ ಬಂದ ಯೋಧನ ಪಾರ್ಥೀವ ಶರೀರಕ್ಕೆ ವಡ್ಡರಹಳ್ಳಿ ಎಚ್ಆರ್ ಪಿ ಕಾಲೋನಿ ಬಳಿ ತಹಸೀಲ್ದಾರ್ ವೈ. ಎಂ ರೇಣುಕುಮಾರ್ ತಾಲೂಕು ಆಡಳಿತದ ಪರವಾಗಿ ಪುಷ್ಪ ಗುಚ್ಚ ಇರಿಸಿ ಗೌರವ ಸಲ್ಲಿಸಿದರು. ಬಳಿಕ ಸ್ವಗ್ರಾಮ ಸಿದ್ದಾಪುರಕ್ಕೆ ಮೃತ ದೇಹ ಬಂದಾಗ ಕುಟುಂಬದವರ ಹಾಗೂ ಬಂಧು, ಬಳಗದವರ ಆಕ್ರಂದನ ಮುಗಿಲು ಮಟ್ಟಿತು.
ಮೃತ ಯೋಧನ ಮನೆಯ ಸಮೀಪ ನಿರ್ಮಿಸಿದ್ದ ವೇದಿಕೆಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಆರೋಗ್ಯ ಇಲಾಖೆ ವತಿಯಿಂದ ಜನರಿಗೆ ಮಾಸ್ಕ್ ವಿತರಿಸಲಾಯಿತು. ಸರಿದಿಯಲ್ಲಿ ಬಂದು ಜನತೆ ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು.
ಈ ವೇಳೆ ಶಾಸಕ ಎ.ಟಿ. ರಾಮಸ್ವಾಮಿ, ಜಿಪಂ ಸದಸ್ಯೆ ರತ್ನಮ್ಮ ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಡಿವೈಎಸ್ ಪಿ ಲಕ್ಷ್ಮೇಗೌಡ, ಸಕಲೇಶಪುರ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ , ಸಿಪಿಐ ದೀಪಕ್, ಪಿಎಸ್ಸೈ ವಿಜಯ ಕೃಷ್ಣ, ಸಾಗರ್, ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಗೌರವ ಸಲ್ಲಿಸಿದರು.
ನಂತರ ಮೃತ ದೇಹವನ್ನು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ತಂದು ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ ಅಂತಿಮ ಸಂಸ್ಕಾರ ನಡೆಸಲಾಯಿತು. ಈ ವೇಳೆ ಸೈನಿಕರು ಮತ್ತು ಪೊಲೀಸರು ಕುಶಾಲು ತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಿದರು. ನೆರೆದಿದ್ದ ಸಾವಿರಾರು ಮಂದಿ ಭಾವುಕರಾದರೆ, ಕುಟುಂಬದ ಸದಸ್ಯರ ರೋಧನ ತಾರಕಕ್ಕೇರಿತು.
ಮೃತ ಯೊಧನ ಪತ್ನಿ ಪೂರ್ಣಿಮಾ, ಪುತ್ರರಾದ ಶ್ರೇಯಸ್,ರಿಕ್ವಿತ್, ತಾಯಿ ಪುಟ್ಟಮ್ಮ ಸೋಧರರು, ಸೇನೆಯ ಅಧಿಕಾರಿಗಳಾದ ಶರತ್ ಕುಮಾರ್, ಆಧಿತ್ಯ ಸಿಂಗ್ ಫರ್ಮಾತ್ , ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿ ಕಾರಿಗಳಾದ ಡಿ.ಎ.ನಾಗಣ್ಣ, ಕರ್ನಲ್ ದೊರೆರಾಜ್, ಪ್ರದೀಪ್ ಸಾಗರ್, ಸೈನಿಕರ ಕಲ್ಯಾಣ ಪುನರ್ವಸತಿ ಇಲಾಖೆ ಅಧಿಕಾರಿಗಳು, ಮಾಜಿ ಸೈನಿಕರು, ಬಿಎಸ್ ಪಿ ಜಿಲ್ಲಾಧ್ಯಕ್ಷ ಅತ್ನಿ ಹರೀಶ್, ಕಂದಾಯ ನಿರೀಕ್ಷಕ ಶಿವಕುಮಾರ್, ಪಿಡಿಒ ಲೋಕೇಶ್ ಇನ್ನಿತರರು ಹಾಜರಿದ್ದರು. ಗ್ರಾಮಸ್ಥರು ಹೆಚ್ಚಿನದಾಗಿ ಸಹಕರಿಸಿ ದೇಶಪ್ರೇಮಕ್ಕೆ ಸಾಕ್ಷಿಯಾದರು.