ನ್ಯೂಸ್

ಹುಕ್ಕೇರಿ ಅಭಿವೃದ್ಧಿಗೆ ಉಮೇಶ ಕತ್ತಿ ಕಾರಣೀಕರ್ತ

ಹುಕ್ಕೇರಿ: ಎಂಟು ಬಾರಿ ಶಾಸಕರಾಗಿ ಆಯ್ಕೆಯಾದ ಉಮೇಶ ಕತ್ತಿ ಅವರು 6ನೇ ಬಾರಿ ಸಚಿವ ಸ್ಥಾನ ಅಲಂಕರಿಸಿದ್ದು ಸಂತಸ ತಂದಿದೆ. ಭಾರತೀಯ ಜನತಾ ಪಕ್ಷ ಅವರ ಹಿರಿತನ ಹಾಗೂ ಅನುಭವ ಗುರುತಿಸಿದೆ ಎಂದು ಪುರಸಭೆ ಅಧ್ಯಕ್ಷ ಎ.ಕೆ. ಪಾಟೀಲ ಹೇಳಿದರು.

ಶಾಸಕ ಉಮೇಶ ಕತ್ತಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಅಭಿಮಾನಿಗಳ ಸಂಭ್ರಮಾಚಾರಣೆ ವೇಳೆ ಮಾತನಾಡಿದ ಅವರು, ಸಚಿವ ಉಮೇಶ ಕತ್ತಿ ಅವರು ಹುಕ್ಕೇರಿ ಮತಕ್ಷೇತ್ರದ ಅಭಿವೃದ್ಧಿಯ ಜತೆಗೆ ಎರಡೂ ಪಟ್ಟಣಗಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಕರ್ತರಾಗಿದ್ದಾರೆ ಎಂದರು.

ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಜಯಗೌಡ ಪಾಟೀಲ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ ಮಾತನಾಡಿ, 4 ದಶಕಗಳಿಂದ ಹುಕ್ಕೇರಿ ಮತಕ್ಷೇತ್ರ ಪ್ರತಿನಿಧಿಸುತ್ತಿರುವ ಸಚಿವ ಉಮೇಶ ಕತ್ತಿ ಉತ್ತಮ ಸಂಘಟಕರು. ಅವರು ಈ ಮೊದಲು ಜಿಲ್ಲಾ ಉಸ್ತುವಾರಿಯಾಗಿದ್ದಾಗ ಮೊಟ್ಟ ಮೊದಲ ಬಾರಿಗೆ ಜಿಪಂನಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿ ಅಧಿಕಾರ ಗ್ರಹಣ ಮಾಡಿತ್ತು. ದೇಶದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೃಷಿ ಸಚಿವರು ಎಂಬ ಖ್ಯಾತಿಯೂ ಅವರದ್ದಾಗಿದೆ. ಇಂತಹ ಸಂಘಟನಾ ಚತುರರನ್ನು ಸಚಿವರನ್ನಾಗಿ ಮಾಡುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಮತ್ತಷ್ಟು ಹೆಚ್ಚುವಂತಾಗಿದೆ ಎಂದರು.

ಪುರಸಭೆ ಉಪಾಧ್ಯಕ್ಷ ಆನಂದ ಗಂಧ, ಸದಸ್ಯರಾದ ಸದಾಶಿವ ಕರೆಪ್ಪಗೋಳ, ಚಂದು ಮುತ್ನಾಳೆ, ಭೀಮಶಿ ಗೋರಖನಾಥ, ಸಿದ್ದು ಹಳಿಜೋಳ, ಮುಖಂಡರಾದ ಮುನ್ನಾ ಕಲಾವಂತ, ಗಿರೀಶ ಕುಲಕರ್ಣಿ, ಪ್ರಕಾಶ ಖೋತ, ಶಂಕರ ಅಲಗರಾವುತ, ಪಿಕೆಪಿಎಸ್ ಉಪಾಧ್ಯಕ್ಷ ಸೋಮಶೇಖರ ಪರಕನಟ್ಟಿ ಇದ್ದರು.

ಅಭಿಮಾನಿಗಳ ಸಂಭ್ರಮ: ಉಮೇಶ ಕತ್ತಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ನೇರಲಿಯಲ್ಲಿ ರವಿ ಪಾಟೀಲ ನೇತೃತ್ವದಲ್ಲಿ ಬಸವೇಶ್ವರ ಪಿಕೆಪಿಎಸ್ ಆಡಳಿತ ಮಂಡಳಿ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.

ಕರಗುಪ್ಪಿ-ಯಲ್ಲಾಪುರದಲ್ಲಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ ಮತ್ತು ಗ್ರಾಪಂ ಅಧ್ಯಕ್ಷ ಗುರುಸಿದ್ದ ಪಾಯಣ್ಣವರ, ಬೆಳವಿಯಲ್ಲಿ ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ನಾಯಿಕ, ಅವರಗೋಳ ಪಿಕೆಪಿಎಸ್‌ನಲ್ಲಿ ಹಿರಾ ಶುಗರ್ ನಿರ್ದೇಶಕ ಅಜ್ಜಪ್ಪ ಕಲ್ಲಟ್ಟಿ, ಕೊಟಬಾಗಿಯಲ್ಲಿ ಕೆಎಂಎಫ್ ನಿರ್ದೇಶಕ ರಾಯಪ್ಪ ಡೂಗ, ಅಮ್ಮಣಗಿಯಲ್ಲಿ ಎಪಿಎಂಸಿ ನಿರ್ದೇಶಕ ಪ್ರಶಾಂತ ಪಾಟೀಲ, ಹರಗಾಪುರದಲ್ಲಿ ಗ್ರಾಪಂ ಅಧ್ಯಕ್ಷ ಪವನ ಪಾಟೀಲ, ಗೋಟೂರದಲ್ಲಿ ಪುಂಡಲೀಕ ನಂದಗಾಂವಿ, ಶಿರಗಾಂವದಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರವೀಂದ್ರ ಹಿಡಕಲ್, ಪಿಕೆಪಿಎಸ್ ಅಧ್ಯಕ್ಷ ರಾಜೇಶ ಬಿರಾದಾರ ಪಾಟೀಲ, ಆನಂದ ಸೋಮಣ್ಣವರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.