ನ್ಯೂಸ್

ಹು-ಧಾ ಪಾಲಿಕೆ ಬಜೆಟ್ ಸಲಹಾ ಸಭೆ; ಬ್ಯಾನರ್ ಅಬ್ಬರ ತಡೆ, ತೆರಿಗೆ ವಿನಾಯಿತಿ ಕೂಗು

ಧಾರವಾಡ: ಪಾಲಿಕೆಯ ತೆರಿಗೆ ವಿನಾಯಿತಿ, ಆದಾಯ ಮೂಲಗಳ ಕ್ರೋಢಿಕರಣ, ಫ್ಲೆಕ್ಸ್, ಬ್ಯಾನರ್‌ಗಳ ಅಬ್ಬರದ ತಡೆ ಸೇರಿ ೨೪೭ ಕುಡಿಯುವ ನೀರಿನ ಪೂರೈಕೆ ಮಾಡುವಂತೆ ಸಾರ್ವಜನಿಕರು ಅಭಿಪ್ರಾಯ ಮಂಡಿಸಿದರು. ನಗರದ ಪಾಲಿಕೆ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಆಯವ್ಯಯ ಸಿದ್ಧತೆ ಕುರಿತು ಸಾರ್ವಜನಿಕರಿಂದ ಸಲಹೆ- ಸೂಚನಾ ಸಭೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾದವು. ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಆಕಳವಾಡಿ ಮಾತನಾಡಿ, ಪಾಲಿಕೆ ಒಡೆತನದ ಆಸ್ತಿಗೆ ತೆರಿಗೆ ಮತ್ತು ದಂಡ ವಸೂಲಿ ಬಾಕಿ ಇದೆ. ಒನ್ ಟೈಮ್ ಸೆಟ್ಲಮೆಂಟ್‌ಗೆ ಅವಕಾಶ ಕೊಡಬೇಕು. ಇದರಿಂದ ಬಾಕಿದಾರರು ಬಾಕಿ ಪಾವತಿ ಮಾಡುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಇದು ಸರ್ಕಾರಕ್ಕೆ ಬಿಟ್ಟ ವಿಷಯ. ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ವರ್ತಕ ಉದಯ ಯಂಡಿಗೇರಿ ಮಾತನಾಡಿ, ಧಾರವಾಡ ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಹಾವಳಿ ಹೆಚ್ಚಾಗಿದ್ದು, ಇದರಿಂದ ಸೌಂದರ್ಯ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು. ಶುಲ್ಕ ಆಕರಣೆ ಮತ್ತು ಅನಽಕೃತ ಬ್ಯಾನರ್‌ಗಳನ್ನು ತೆರವುಗೊಳಿಸಿ ದಂಡ ವಿಽಸಲಾಗುವುದು ಎಂದು ಡಾ. ಉಳ್ಳಾಗಡ್ಡಿ ತಿಳಿಸಿದರು. ಕುಡಿಯುವ ನೀರಿನ ಪೈಪ್ ಅಳವಡಿಕೆಗಾಗಿ ಎಲ್ ಆ್ಯಂಡ್ ಟಿ ಕಂಪನಿ ರಸ್ತೆಗಳನ್ನು ಅಗೆದು ಹಾಗೆ ಬಿಟ್ಟಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಯಂಡಿಗೇರಿ ಗಮನಕ್ಕೆ ತಂದರು. ಡಿಸೆAಬರ್ ಅಂತ್ಯಕ್ಕೆ ಎಲ್ಲ ವಾರ್ಡ್ಗಳಿಗೆ ೨೪೭ ಕುಡಿಯುವ ನೀರು ಪೂರೈಕೆಯಾಗಲಿದೆ. ರಸ್ತೆ ಅಗೆದು ಹಾಗೆ ಬಿಟ್ಟಿರುವ ದೂರುಗಳಿದ್ದರೆ ನನಗೆ ಹಾಗೂ ಸ್ಥಳೀಯ ಸದಸ್ಯರಿಗೆ ನೀಡಬೇಕು ಎಂದು ಡಾ. ಉಳ್ಳಾಗಡ್ಡಿ ತಿಳಿಸಿದರು.
ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್, ಶಿವು ಹಿರೇಮಠ, ಮಯೂರ ಮೋರೆ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರು ಇದ್ದರು.