ಶಿವಮೊಗ್ಗ: ವಿಮಾನಯಾನ ಆರಂಭಕ್ಕೆ ಸಜ್ಜುಗೊಂಡಿರುವ ಶಿವಮೊಗ್ಗ ಏರ್‌ಪೋರ್ಟ್ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಪ್ರಯಾಣಿಕರ ಊಟೋಪಚಾರಕ್ಕೆ ಕಿಮ್ಮನೆ ಕಾಫಿ ಲಾಂಜ್ ಸಜ್ಜುಗೊಂಡಿದೆ. ಇಂಡಿಗೋ ಕಂಪನಿಯ ಹೆಲ್ಪ್ ಡೆಸ್ಕ್, ಟಿಕೆಟ್ ಕೌಂಟರ್ ಸಿದ್ಧಪಡಿಸಲಾಗಿದೆ.
ಏರ್‌ಪೋರ್ಟ್‌ನಲ್ಲಿ ಇನ್ನೂ ಹಲವು ವಾಣಿಜ್ಯ ಮಳಿಗೆಗಳು ಖಾಲಿಯಿವೆ. ಇದನ್ನು ಭರ್ತಿ ಮಾಡಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಏರ್‌ಪೋರ್ಟ್‌ನ ಎದುರು ಪ್ರಯಾಣಿಕರ ವಾಹನ ನಿಲುಗಡೆಗೆ ಇನ್ನೂ ಟೆಂಡರ್ ಪೂರ್ಣಗೊಂಡಿಲ್ಲ. ರಾಜ್ಯ ಪೊಲೀಸ್ ಇಲಾಖೆ ಅಧೀನದಲ್ಲಿರುವ ಕೆಎಸ್‌ಐಎಸ್‌ಎಫ್‌ನ 30ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇವರು ದಿನದ 24 ತಾಸು ಕಾರ್ಯನಿರ್ವಹಿಸಲಿದ್ದಾರೆ.
ಶಿವಮೊಗ್ಗದಿಂದ ವಿಮಾನದಲ್ಲಿ ಪ್ರಯಾಣಿಸಲು ಆನ್‌ಲೈನ್ ಮೂಲಕ ಸೀಟು ಕಾಯ್ದಿರಿಸಿಕೊಳ್ಳಬಹುದು. ಏರ್‌ಪೋರ್ಟ್‌ನಲ್ಲಿರುವ ಟಿಕೆಟ್ ಕೌಂಟರ್‌ನಲ್ಲೂ ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ. ಸದ್ಯಕ್ಕೆ ಕಡೇ ಕ್ಷಣದಲ್ಲಿ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ. ಟಿಕೆಟ್‌ಗಾಗಿ ಅಧಾರ್ ಕಾರ್ಡ್‌ನ್ನು ದಾಖಲೆಯಾಗಿ ತೋರಿಸಿದರೆ ಸಾಕು.
ಪ್ರಯಾಣಿಕರಿಗೆ ಮಾತ್ರ ಪ್ರವೇಶ: ಟರ್ಮಿನಲ್‌ವೊಳಗೆ ಟಿಕೆಟ್ ಹೊಂದಿದ ಪ್ರಯಾಣಿಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ನೀಡುವುದಿಲ್ಲ. ಪ್ರಯಾಣಿಕರನ್ನು ಕಳುಹಿಸಲು ಬರುವ ಸಂಬಂಧಿಕರು, ವಾಹನ ಚಾಲಕರು ಟರ್ಮಿನಲ್ ಮುಂಭಾಗದಲ್ಲೇ ಅವರನ್ನು ಇಳಿಸಿ ಅಲ್ಲಿಂದ ಹೊರಡಬೇಕು. ಮುಂದಿನ ದಿನಗಳಲ್ಲಿ ಇಂತಹವರಿಗೆ ಟರ್ಮಿನಲ್ ಟಿಕೆಟ್ ನೀಡುವ ಸಾಧ್ಯತೆಗಳೂ ಇವೆ.
ವಿಮಾನದಲ್ಲಿ ಇದಕ್ಕೆ ನಿಷೇಧ: ವಿಮಾನದಲ್ಲಿ ಪ್ರಯಾಣಿಸುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಅವರು ಕೆಲವು ವಸ್ತುಗಳನ್ನು ವಿಮಾನದೊಳಕ್ಕೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಲೈಟರ್, ರಾಸಾಯನಿಕ ಪುಡಿ ಹಾಗೂ ದ್ರವ ಕತ್ತರಿ, ಕತ್ತಿ, ಚಾಕು ಮುಂತಾದವನ್ನು ತೆಗೆದುಕೊಂಡು ಹೋಗುವಂತಿಲ್ಲ.
ಹಾಕಿ ಸ್ಟಿಕ್, ಬ್ಯಾಟ್, ಚೆಂಡು, ಎಲ್ಲ ರೀತಿಯ ಗನ್ ಮತ್ತು ಬಂದೂಕುಗಳು, ಸುತ್ತಿಗೆ, ಗರಗಸ, ಕೊಡಲಿ ಮೊದಲಾದ ವಸ್ತುಗಳು ಹಾಗೂ ಯಾವುದೇ ಬಗೆಯ ಸ್ಫೋಟಕಗಳಿಗೆ ವಿಮಾನದೊಳಕ್ಕೆ ಅವಕಾಶವಿರುವುದಿಲ್ಲ.