ಸೊರಬ: ಪಟ್ಟಣದ ಹಿರೇಶಕುನ ಗ್ರಾಮದಲ್ಲಿ ಮಂಗಳವಾರ 22 ವರ್ಷದ ಬಳಿಕ ಆರಿದ್ರಾ ಮಳೆ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಗ್ರಾಮದ ಅಭಿವೃದ್ಧಿಗಾಗಿ ಹಾಗೂ ಐಕ್ಯತೆ ಸಾರುವ ಆರಿದ್ರೆ ಮಳೆ ಹಬ್ಬ ಗ್ರಾಮದಲ್ಲಿ ವಿಶೇಷ. ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯದಂತೆ ಗ್ರಾಮ ದೇವತೆಗಳಾದ ಮಾರಮ್ಮ ಮತ್ತು ದುರ್ಗಮ್ಮ ದೇವರುಗಳ ಪಲ್ಲಕ್ಕಿ ಉತ್ಸವದೊಂದಿಗೆ ಹೆಡಗೆ ಉತ್ಸವ ನೆರವೇರಿತು.
ಗ್ರಾಮದ ಪ್ರತಿ ಮನೆಯಲ್ಲಿ ಮಡಿಯಿಂದ ತಯಾರಿಸಿದ ಸಸ್ಯಾಹಾರವನ್ನು ಹೊಸ ಉಡುಗೆ ತೊಟ್ಟ ಮಹಿಳೆಯರು ಹಾಗೂ ಪುರುಷರು ಹೆಡಗೆಯಲ್ಲಿ ತುಂಬಿಕೊಂಡು ದುರ್ಗಮ್ಮ ಮತ್ತು ಮಾರಮ್ಮ ದೇವಸ್ಥಾನದಿಂದ ಪಲ್ಲಕ್ಕಿಯ ಉತ್ಸವದೊಂದಿಗೆ ಒಂದು ಕಿ.ಮೀ. ದೂರ ಜಮೀನಿಗೆ ಸಾಗಿದರು. ಅಲ್ಲಿ ದೇವರ ಮೂರ್ತಿ ಸ್ಥಾಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು. ನಂತರ ಮನೆಯಲ್ಲಿ ಎಲ್ಲರೂ ಸೇರಿ ಊಟ ಮಾಡಿದರು. ಹಬ್ಬದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳು, ಮಾರಿಕಾಂಬ, ಭೂತನಕಟ್ಟೆ ಹಾಗೂ ದುರ್ಗಮ್ಮ ದೇವಸ್ಥಾನಗಳು ವಿದ್ಯುತ್ ದೀಪಗಳಿಂದ ಹಾಗೂ ತಳಿರುತೋರಣಗಳಿಂದ ಕಂಗೊಳಿಸಿದವು. ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಗ್ರಾಮ ಸಮಿತಿಯ ಗುರುಮೂರ್ತಿ, ಎಸ್.ಎಚ್.ಚಂದ್ರಪ್ಪ, ಚಿನ್ನಪ್ಪ, ಬಸವರಾಜ್ ಪಾಣಿ, ಡಾಕಪ್ಪ ಪಾಣಿ, ಕೆರೆಯಪ್ಪ, ನಾಗರಾಜ್, ರಾಮಪ್ಪ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.