ನ್ಯೂಸ್

ಹಿರಿಯರಿಗೆ ಆರ್ಥಿಕ, ಸಾಮಾಜಿಕ ಭದ್ರತೆ ಅವಶ್ಯ


ಹಾಸನ : ನಮ್ಮ ಸಂಸ್ಕೃತಿಯಲ್ಲಿ ಹಿರಿಯರಿಗೆ ಪೂಜ್ಯ ಸ್ಥಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರು ನಿರ್ಲಕ್ಷೃಕ್ಕೆ ಒಳಗಾಗುತ್ತಿರುವುದರಿಂದ ಅವರಿಗೆ ಆರ್ಥಿಕ ಭದ್ರತೆ ಹಾಗೂ ಸಾಮಾಜಿಕ ರಕ್ಷಣೆ ಒದಗಿಸುವತ್ತ ಗಮನ ನೀಡಬೇಕಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಎಂ.ಸಿ.ನಿರ್ಮಲಾ ಹೇಳಿದರು.


ಆಲೂರು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದೊಂದಿಗೆ ನ್ಯಾಯಾಲಯದ ಆವರಣದಲ್ಲಿ ಹಿರಿಯ ನಾಗರಿಕ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಶಿಬಿರ ಉದ್ಘಾಟಿಸಿ ಮಾತನಾಡಿದರು.


ಹಿರಿಯರಿಗೆ ಪ್ರೀತಿಯಿಂದ ಸೇವೆ ಮಾಡುವುದರ ಬದಲು, ವೃದ್ಧಾಶ್ರಮಕ್ಕೆ ಕಳಿಸುವ ಪರಿಪಾಠ ಬೆಳೆಯುತ್ತಿದೆ. ಮಕ್ಕಳು ವಯಸ್ಸಾದ ತಂದೆ-ತಾಯಿಯರನ್ನು ನಿರ್ಲಕ್ಷ್ಯಭಾವದಿಂದ ನೋಡಬಾರದು. ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ. ಹಿರಿಯ ನಾಗರಿಕರು ಸಂಘಟಿತರಾದರೆ ಮಾತ್ರ ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದರು.


ಹಿರಿಯ ವಕೀಲ ಬಿ.ಮಂಜೇಗೌಡ ಹಕ್ಕು ಮತ್ತು ಕರ್ತವ್ಯಗಳ ಕುರಿತು ಮಾತನಾಡಿ, ತಂದೆ-ತಾಯಿಯರನ್ನು ದೇವರ ಸಮಾನ ಎಂದು ಗೌರವಿಸುವುದು ನಮ್ಮ ದೇಶದ ಸಂಸ್ಕೃತಿ. ತಂದೆ-ತಾಯಿ ಹೇಳಿದ ಮಾತನ್ನು ವೇದವಾಕ್ಯ ಎಂದು ಪಾಲಿಸುತ್ತಿದ್ದಂತಹ ಕಾಲದಲ್ಲಿ ಪಾಲಕರು ಹಾಗೂ ಹಿರಿಯರನ್ನು ದೇವರ ಸಮನಾಗಿ ಕಾಣಲಾಗುತ್ತಿತು. ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ ತಂದೆ, ತಾಯಿ ಮಕ್ಕಳಿಗೆ ಭಾರವಾಗಿ ಕಾಣುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ತಿಳಿಸಿದರು.


ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಇಡೀ ಜೀವಮಾನದಲ್ಲಿ ಸಾಕಷ್ಟು ಕಷ್ಟ ಪಟ್ಟು ಸಾಕಿ, ಸಲುಹಿದ ಪ್ರತಿಫಲವಾಗಿ ಸಂಧ್ಯಾ ಕಾಲದಲ್ಲಿ ಸಂತೋಷದ ಜೀವನ ನಡೆಸಬೇಕಾದ ಹಿರಿಯರು ವೃದ್ಧಾಶ್ರಮ ಸೇರುತ್ತಿರುವುದು ಕಳವಳಕಾರಿ. ನಮ್ಮ ಸರ್ಕಾರಗಳು ವೃದ್ಧರಿಗಾಗಿ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಅನೇಕ ಹಿರಿಯ ನಾಗರಿಕರಿಗೆ ಈ ಯೋಜನೆಗಳು ಬೇರೆ ಬೇರೆ ಕಾರಣಕ್ಕೆ ತಲುಪದೇ ಹೋಗಿರಬಹುದು. ನಿಮಗೆ ಇಂಥ ಪ್ರಕರಣಗಳು ಗಮನಕ್ಕೆ ಬಂದರೆ ಅವರಿಗೆ ನೆರವಾಗುವ ಪ್ರಯತ್ನ ಮಾಡಿ. ಹಿರಿಯ ನಾಗರಿಕರ ಕಾರ್ಡ್ ಹಾಗೂ ಪಿಂಚಣಿ ಮಾಡಿಸಿಕೊಡುವುದು ಇತ್ಯಾದಿ ಕಾರ್ಯಗಳಲ್ಲಿ ನೆರವಾಗಿ. ನಿಮ್ಮ ಇಂಥ ಈ ಸಹಾಯವು ಆ ವೃದ್ಧರಿಗೆ ದೊಡ್ಡ ಉಪಕಾರವಾಗಬಹುದು. ವಿಶ್ವ ಹಿರಿಯ ನಾಗರಿಕರ ದಿನ ಆಚರಣೆಗೂ ಒಂದು ಅರ್ಥ ಸಿಗಬಹುದು ಎಂದರು.


ಕಾರ್ಯಕ್ರಮದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕಿ ಜಯಶ್ರೀ, ವಕೀಲರ ಸಂಘದ ಅಧ್ಯಕ್ಷ ಮಧು, ಹಿರಿಯ ವಕೀಲರಾದ ಮಹೇಶ್, ಬಿ.ಸುರೇಶ್, ಟಿ.ಎ.ಕುಮಾರ್ ಮತ್ತಿತರರಿದ್ದರು.