ಸೊರಬದ ಕಾನಕೇರಿ ಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ವೃದ್ಧ ದಂಪತಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪ್ರಭು ಮೇಸಿ, ಶ್ರೀರಂಜನಿ ಪ್ರವೀಣಕುಮಾರ್, ಮಧುರಾಯ್ ಶೇಟ್, ಜಯಂತಿ, ಪೂರ್ಣಿಮಾ ಶಿವಯೋಗಿ, ರಾಜಶೇಖರ ಗುತ್ತಿ ಇದ್ದರು. 
ನ್ಯೂಸ್

ಹಿರಿಯರ ದಾಂಪತ್ಯ ಮಾದರಿಯಾಗಿರಲಿ

ಸೊರಬ: ಸಣ್ಣಪುಟ್ಟ ವಿಷಯಗಳಿಗೆ ವೈವಾಹಿಕ ವಿಚ್ಛೇದನ ಪಡೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸುಸೂತ್ರವಾಗಿ ಜೀವನ ಸಾಗಿಸುತ್ತಿರುವ ಹಿರಿಯರ ದಾಂಪತ್ಯ ಜೀವನ ಇಂದಿನ ದಂಪತಿಗಳಿಗೆ ಮಾದರಿಯಾಗಬೇಕು ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಕಾನಕೇರಿ ಮಠದಲ್ಲಿ ಮಂಗಳವಾರ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಹಿರಿಯ ದಂಪತಿ, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಸಂಸಾರದಲ್ಲಿ ಬರುವ ಸಣ್ಣಪುಟ್ಟ ಮನಸ್ತಾಪಗಳು ಶಾಶ್ವತವಲ್ಲ ಎನ್ನುವ ಅರಿವನ್ನು ಹೊಂದಿದಾಗ ಮಾತ್ರ ಸುಖಿಗಳಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಇಬ್ಬರಲ್ಲೂ ತಾಳ್ಮೆ, ಸಹನೆ ಇದ್ದರೆ ಒಂದು ಮಾದರಿಯಾದ ಕೌಟುಂಬಿಕ ವ್ಯವಸ್ಥೆ ಭದ್ರಗೊಳ್ಳಲಿದೆ. ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ತುಂಬ ಕಷ್ಟಪಡುತ್ತಾರೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವ ಪಾಲಕರು ಅವರಿಗೆ ಸಂಸ್ಕಾರ ನೀಡುವಲ್ಲಿ ಕಾಳಜಿ ವಹಿಸಿದರೆ ಮಾತ್ರ ನೀವು ಗಳಿಸದೆ ಇರುವುದನ್ನು ಅವರಿಂದ ನಿರೀಕ್ಷೆ ಮಾಡಬಹುದು ಎಂದು ತಿಳಿಸಿದರು.

ವಿವಾಹವಾಗಿ 50 ವಸಂತಗಳನ್ನು ಪೂರೈಸಿದ ದಂಪತಿಗಳು, ಅಯೋಧ್ಯೆ, ಕಾಶಿಯಾತ್ರೆ, ಪ್ರಯಾಗ್ ರಾಜ್ ಪ್ರವಾಸಕ್ಕೆ ಹೋಗಿ ಬಂದ ಯಾತ್ರಿಕರು ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮಠದಿಂದ ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷ ಪ್ರಭು ಮೇಸಿ, ಉಪಾಧ್ಯಕ್ಷೆ ಶ್ರೀರಂಜನಿ ಪ್ರವೀಣಕುಮಾರ್, ಸದಸ್ಯ ಮಧುರಾಯ್ ಶೇಟ್, ಧರ್ಮಸ್ಥಳ ಯೋಜನಾಧಿಕಾರಿ ಜಯಂತಿ, ಪೂರ್ಣಿಮಾ ಶಿವಯೋಗಿ, ರಾಜಶೇಖರ ಗುತ್ತಿ, ಜಗದೀಶ್, ಅಶೋಕ ಅಂಡಗಿ, ನಾಗರಾಜ್ ಗುತ್ತಿ, ವಿಶ್ವನಾಥ್, ಡಿ.ಶಿವಯೋಗಿ, ಪುಷ್ಪಾ, ಮಮತಾ, ಚಂದ್ರಶೇಖರ ನಿಜಗುಣ ಇತರರಿದ್ದರು.