ನ್ಯೂಸ್

ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ನಿಧನ

ಹಿರಿಯ ಪತ್ರಕರ್ತ, ‘ಸ್ಟಾರ್ ಆಫ್ ಮೈಸೂರು’ ಹಾಗೂ ‘ಮೈಸೂರು ಮಿತ್ರ’ ಪತ್ರಿಕೆಗಳ ಸಂಪಾದಕರಾಗಿದ್ದ ಕೆ.ಬಿ.ಗಣಪತಿ (85) ಅವರು ಭಾನುವಾರ ಹೃದಯಾಘಾತದಿಂದ ನಿಧನರಾದರು.

ಕೆ.ಸಿ.ಲೇಔಟ್‌ನಲ್ಲಿ ವಾಸವಿದ್ದ ಕೆ.ಬಿ.ಗಣಪತಿ ಅವರಿಗೆ ಹಠಾತ್ ಹೃದಯಾಘಾತ ಆಗಿತ್ತು. ಕೂಡಲೇ ಅವರನ್ನು ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ಮೃತರಿಗೆ ಪತ್ನಿ ರಾಲಿ ಗಣಪತಿ, ಪುತ್ರರಾದ ವಿಕ್ರಂ ಮುತ್ತಣ್ಣ ಮತ್ತು ಮಿಕ್ಕಿ ಬೋಪಣ್ಣ ಇದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಕೊಡಗು ಮೂಲದ ಗಣಪತಿ ಅವರು ತಮ್ಮ ವೃತ್ತಿ ಜೀವನವನ್ನು ವಕೀಲಿಕೆಯ ಮೂಲಕ ಪ್ರಾರಂಭಿಸಿ, ನಂತರ ಜಾಹೀರಾತು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. 1978ರಲ್ಲಿ ಸ್ಟಾರ್ ಆಫ್ ಮೈಸೂರು (ಇಂಗ್ಲಿಷ್) ಮತ್ತು ಮೈಸೂರು ಮಿತ್ರ (ಕನ್ನಡ) ಎಂಬ ಎರಡು ಪತ್ರಿಕೆಗಳನ್ನು ಸ್ಥಾಪಿಸಿದ್ದರು.

ವರದಿಗಾರಿಕೆ, ಅಂಕಣ, ಸಂಪಾದಕೀಯ ಲೇಖನಗಳ ಮೂಲಕ ಜನಮನ ಗೆದ್ದ ಗಣಪತಿ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಬಾಂಬೆಯಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಪಡೆದಿದ್ದ ಅವರು ಕನ್ನಡ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆ ಗುರುತಿಸಿ 2001ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಆದರ್ಶವಾದಿ, ದಿ ಕ್ರಾಸ್ ಅಂಡ್ ದಿ ಕೂರ್ಗ್ಸ್, ಗಾಂಧೀಸ್ ಎಪಿಸ್ಟಲ್ ಟು ಒಬಾಮಾ ಮುಂತಾದ ಕೃತಿಗಳನ್ನು ಪ್ರಕಟಿಸಿ, ಓದುಗರ ಮನಗೆದ್ದಿದ್ದರು. ಸುದ್ದಿ ಆಧಾರಿತ ಲೇಖನಗಳಷ್ಟೇ ಅಲ್ಲದೆ, ವಿಮರ್ಶಾತ್ಮಕ ಅಂಕಣಗಳ ಮೂಲಕವೂ ಅವರು ಜನಮನ ಗೆದ್ದಿದ್ದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇಸ್ರೇಲ್, ಅಮೆರಿಕ, ಈಜಿಪ್ಟ್ ಮುಂತಾದ ದೇಶಗಳಿಗೆ ಭೇಟಿ ಕೊಟ್ಟಿದ್ದರು.