ನ್ಯೂಸ್

ಹಿರಿಯ ಪತ್ರಕರ್ತ ಕೆ.ಎಸ್ ಸಚ್ಚಿದಾನಂದ ಮೂರ್ತಿ ನಿಧನ / ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ. ಎಸ್ ಸುರೇಶ್ ಸಂತಾಪ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಮೂಲದ ಹಿರಿಯ ಪತ್ರಕರ್ತ ಕೆ.ಎಸ್. ಸಚ್ಚಿದಾನಂದ ಮೂರ್ತಿ (೬೮) ಶುಕ್ರವಾರ ನಿಧನ ಹೊಂದಿದ್ದು, ಕೆಲ ದಿನಗಳ ಹಿಂದೆ ಶ್ವಾಸಕೋಶ ಕಸಿಗೆ ಒಳಗಾಗಿದ್ದರು. ಇದೀಗ ಮತ್ತೆ ಶ್ವಾಸಕೋಶ ಸೋಂಕಿನಿAದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಸಚ್ಚಿ ನಿಧನಕ್ಕೆ ಕೋಲಾರ ಉಸ್ತುವಾರಿ ಸಚಿವರಾದ ಬಿ. ಎಸ್. ಸುರೇಶ್ ಕಂಬನಿ ಮಿಡಿದಿದ್ದಾರೆ.

ಸಚ್ಚಿದಾನಂದ ಮೂರ್ತಿಯವರು ೧೯೮೨ ರಲ್ಲಿ ದಿ ವೀಕ್ ಸೇರಿದ್ದು, ಬಳಿಕ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. ದೆಹಲಿಯಲ್ಲಿ ೪ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಡಿಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಮಾಧ್ಯಮ ವಲಯದಲ್ಲಿ ಸಚ್ಚಿ ಎಂದೇ ಖ್ಯಾತಿ ಪಡೆದಿದ್ದ ಸಚ್ಚಿದಾನಂದ ಅವರು ಕಳೆದ ವರ್ಷ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದ್ದರು. ನಿವೃತ್ತಿಯಾಗುವವರೆಗೂ ಮಲಯಾಳ ಮನೋರಮಾ ಗ್ರೂಪ್‌ನಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಣೆಯಲ್ಲಿ ಸಿದ್ಧಹಸ್ತರಾಗಿದ್ದರು.

ನ್ಯೂ ಡೆಲ್ಲಿ ಅಂಕಣದ ಮೂಲಕ ಮನೆಮಾತಾಗಿದ್ದ ಹಿರಿಯ ಪತ್ರಕರ್ತ ಮಲಯಾಳ ಮನೋರಮಾ ಮತ್ತು ದಿ ವೀಕ್ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನಿಂದ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಸಹೃದಯಿಯಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ. ಭಗವಂತ ಅವರಿಗೆ ಸದ್ಗತಿ ದಯಪಾಲಿಸಲಿ ಹಾಗೂ ಅವರು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಕೋಲಾರ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚನೆ ವ್ಯಕ್ತಪಡಿಸಿದೆ.

ಚಿತ್ರ ೧೩ ಕೆ.ಎಲ್.ಆರ್. ೦೩ : ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಭಾವಚಿತ್ರ