ಎನ್.ಆರ್.ಪುರ: ಸರ್ಕಾರ ಹಿರಿಯ ನಾಗರಿಕರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜೆಎಂಎಫ್‌ಸಿ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ತಿಳಿಸಿದರು. ಬುಧವಾರ ಮಡಬೂರಿನ ತಾಲೂಕು ಕಾನೂನು ಸೇವಾ ಸಮಿತಿ ಏರ್ಪಡಿಸಿದ್ದ ಹಿರಿಯ ನಾಗರಿಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾನೂನು ಸೇವಾ ಸಮಿತಿಯಿಂದ ಮಹಿಳೆಯರಿಗೆ, 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ ಬಡವರಿಗೆ ಉಚಿತವಾಗಿ ಕಾನೂನು ನೆರವು ನೀಡುತ್ತೇವೆ. ತ್ವರಿತಗತಿಯಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಈ ಸೌಲಭ್ಯವನ್ನು ಮಹಿಳೆಯರು, ಬಡವರು ಉಪಯೋಗಿಸಿಕೊಳ್ಳಬೇಕು ಎಂದರು.
ಮಡಬೂರು ಪಂಚವಟಿ ಸೇವಾ ಕೇಂದ್ರ ವೃದ್ಧಾಶ್ರಮದ ಅಧ್ಯಕ್ಷ ಡಿ.ಸಿ.ದಿವಾಕರ ಮಾತನಾಡಿ, ಹಿರಿಯ ನಾಗರಿಕರನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಅನುಕೂಲವಾಗಲಿ ಎಂದು ಮಡಬೂರಿನಲ್ಲಿ ದಾನಿಗಳ ಸಹಕಾರದೊಂದಿಗೆ ಪಂಚವಟಿ ಸೇವಾ ಕೇಂದ್ರ ಪ್ರಾರಂಭಿಸಿದ್ದು ಪ್ರಸ್ತುತ 10 ಹಿರಿಯ ನಾಗರಿಕರಿದ್ದಾರೆ ಎಂದು ತಿಳಿಸಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಹಿರಿಯ ನಾಗರಿಕರಿಗೆ ಸರ್ಕಾರ ವೃದ್ಧಾಪ್ಯ ವೇತನ ಸೇರಿದಂತೆ ಹಲವು ಸೌಲಭ್ಯ ನೀಡುತ್ತಿದೆ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಡಬೂರು ಪಂಚವಟಿ ಸೇವಾ ಕೇಂದ್ರದ ಉಪಾಧ್ಯಕ್ಷ ಎಲ್.ಎಂ.ಸತೀಶ್, ಖಜಾಂಚಿ ಎಸ್.ಎಸ್.ಶಾಂತಕುಮಾರ್, ಸದಸ್ಯರಾದ ವನಮಾಲಮ್ಮ, ಕೃಷ್ಣಪ್ಪಗೌಡ, ರೋಟರಿ ಕ್ಲಬ್ ಅಧ್ಯಕ್ಷ ದಿವಾಕರ್, ಹಿರಿಯ ನಾಗರಿಕರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.