ನ್ಯೂಸ್

ಹಿಮವದ್ ವೇಣುಗೋಪಾಲಸ್ವಾಮಿ ರಥೋತ್ಸವ ಸಂಭ್ರಮ

ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಿಮವದ್ ವೇಣುಗೋಪಾಲಸ್ವಾಮಿ ದಿವ್ಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ರಥೋತ್ಸವ ಅಂಗವಾಗಿ ಶ್ರೀ ರುಕ್ಷ್ಮಿಣಿ ಸತ್ಯಭಾಮ ಸಹಿತ ಕೊಳಲು ನುಡಿಸುತ್ತಿರುವ ಭಂಗಿಯಲ್ಲಿ ನಿಂತಿರುವ ವೇಣುಗೋಪಾಲನಿಗೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ ನೆರವೇರಿಸಿದ ನಂತರ 12.30ಕ್ಕೆ ಸರಿಯಾಗಿ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಮಾಡಿಸಿ ರಥದಲ್ಲಿ ಕೂರಿಸಲಾಯಿತು. ತಹಸೀಲ್ದಾರ್ ಮಲ್ಲಿಕಾರ್ಜುನ ಅವರು ತೇರಿಗೆ ಪೂಜೆ ಸಲ್ಲಿಸಿ ದಿವ್ಯ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಭಕ್ತರು ಗೋವಿಂದ…ಗೋವಿಂದ… ಎಂದು ಘೋಷಣೆ ಕೂಗುತ್ತ ರಥಕ್ಕೆ ಹಣ್ಣು ದವನ ಎಸೆದು ಪುನೀತರಾದರು. ರಥವನ್ನು ದೇವಾಲಯ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಿಸಿ ಸ್ವಸ್ಥಾನದಲ್ಲಿ ನಿಲ್ಲಿಸಲಾಯಿತು. ತಾಲೂಕು ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು.

ಬಂಡೀಪುರ ರಾಷ್ಟ್ರೀಯ ಉದ್ಯಾನದ ಹುಲಿ ಯೋಜನೆಯಲ್ಲಿರುವ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಬೆಟ್ಟಕ್ಕೆ ಹೋಗಿ ಬರಲು ಭಕ್ತರಿಗೆ ಸಾರಿಗೆ ಸಂಸ್ಥೆಯಿಂದ ಸಾಕಷ್ಟು ಬಸ್ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು. ಭಕ್ತರು ಹಾಗೂ ಪ್ರವಾಸಿಗರಿಗೆ ಪ್ರಸಾದ ವಿತರಿಸಲಾಯಿತು. ಪಟ್ಟಣ ಠಾಣೆ ಪೊಲೀಸರು ಮಜ್ಜಿಗೆ ವಿತರಿಸಿದರು.