ಪಿರಿಯಾಪಟ್ಟಣ: ಪುರಸಭೆ ವ್ಯಾಪ್ತಿಗೆ ಒಳಪಡುತ್ತಿರುವ ಹರವೆ ಮಲ್ಲರಾಜಪಟ್ಟಣ ವ್ಯಾಪ್ತಿಯ 60ಕ್ಕೂ ಹೆಚ್ಚು ಮತದಾರರನ್ನು ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆ ಮಾಡಲು ಕಾಂಗ್ರೆಸ್ ಮುಖಂಡ ಮೋಹನ್ ಕುಮಾರ್ ಮನವಿ ಸಲ್ಲಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಗ್ರಾಮಕ್ಕೆ ಪರಿಶೀಲನೆ ನಡೆಸಲು ಬಂದಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥ ಕುಮಾರ್ ಮಾತನಾಡಿ, ಕಳೆದ ಮೂರು, ನಾಲ್ಕು ಚುನಾವಣೆಗಳಿಂದ ಪುರಸಭೆ ವ್ಯಾಪ್ತಿಗೆ ಒಳಪಡುವ ಹರವೆ ಮಲ್ಲರಾಜಪಟ್ಟಣದಲ್ಲಿ ನಾವು ಮತ ಚಲಾಯಿಸುತ್ತಿದ್ದು, ಆಸ್ತಿ ತೆರಿಗೆ ಮತ್ತು ನೀರಿನ ಕರವನ್ನು ಸಹ ಪುರಸಭೆಗೆ ಪಾವತಿಸುತ್ತಿದ್ದೇವೆ. ಈ ಹಿಂದೆ 2018 ರಲ್ಲಿ ಇದೇ ಮೋಹನ್ ಕುಮಾರ್ ಪುರಸಭೆ ವ್ಯಾಪ್ತಿಯಿಂದ ಕೈಬಿಟ್ಟು ಹಿಟ್ನೆಹೆಬಾಗಿಲು ಗ್ರಾಪಂ ವ್ಯಾಪ್ತಿಗೆ ನಮ್ಮನ್ನು ಸೇರಿಸುವಂತೆ ದುರುದ್ದೇಶದಿಂದ ಮನವಿ ಮಾಡಿದ್ದರು. ಅವರ ಮನವಿಯನ್ನು 2020ರಲ್ಲಿ ತಹಸೀಲ್ದಾರ್ ತಿರಸ್ಕರಿಸಿದ್ದರು. ಆದರೆ ಪುನಃ ಇತ್ತೀಚೆಗೆ ಅರ್ಜಿ ನೀಡಿದ್ದು, ನಮ್ಮನ್ನು ಸೌಲಭ್ಯವಂಚಿತರನ್ನಾಗಿ ಮಾಡುವ ದುರುದ್ದೇಶ ಹೊಂದಿದ್ದಾರೆ. ಅವರ ಮನವಿಯನ್ನು ಪುರಸ್ಕರಿಸಿದಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹರವೇ ಮಲ್ಲರಾಜಪಟ್ಟಣ ವಾರ್ಡ್‌ನ ಪುರಸಭೆ ಸದಸ್ಯ ಪ್ರಕಾಶ್ ಸಿಂಗ್ ಮಾತನಾಡಿ, 2014-15ರಿಂದ ನಮ್ಮ ವಾರ್ಡ್‌ನಲ್ಲಿ ಮತದಾರರಾಗಿರುವ ಇವರನ್ನು, ರಾಜಕೀಯ ದುರುದ್ದೇಶದಿಂದ ಬೇರೆಡೆಗೆ ಸೇರ್ಪಡೆ ಮಾಡಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಶಶಿಕುಮಾರ್, ಶಿವಣ್ಣ, ಮಂಜುನಾಥ್, ಕುಮಾರ್ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಸ್ಥರು ಹಾಜರಿದ್ದರು.