ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಹಿಂದುಳಿದ ತಾಲೂಕುಗಳ ಜನರ ತಲಾ ಆದಾಯ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸಿ ಯೋಜನೆಗಳನ್ನು ರೂಪಿಸಬೇಕು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ, ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಪ್ರಾದೇಶಿಕ ಸಮತೋಲನ ಸಂವಾದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಂಜುಂಡಪ್ಪ ವರದಿಯಲ್ಲಿ 35 ಸೂಚ್ಯಂಕಗಳನ್ನು ಅಧ್ಯಯನ ಮಾಡಿ ವರದಿ ನೀಡಲಾಗಿತ್ತು. ವರದಿಯಂತೆ 31 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೂ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗಿಲ್ಲ. ಈ ಬಗ್ಗೆ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ವತಿಯಿಂದ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಲಾಗುವುದು ಎಂದರು.
ಅನುದಾನ ಖರ್ಚು ಮಾಡಿದರೆ ಅಭಿವೃದ್ಧಿ ಆಗುತ್ತದೆ ಎಂಬುದು ಸುಳ್ಳು. ಅಲ್ಲಿನ ಜನರ ತಲಾ ಆದಾಯ ಹೆಚ್ಚಾಗಬೇಕು. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ತಲಾ ಆದಾಯದಲ್ಲಿ ವ್ಯತ್ಯಾಸ ಇವೆ. ಉತ್ತರ ಕರ್ನಾಟಕ ಕಡಿಮೆ ತಲಾ ಆದಾಯ ಹೊಂದಿವೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಹೆಚ್ಚು ಕಾರ್ಖಾನೆಗಳು ಸ್ಥಾಪನೆ ಆಗಬೇಕು. ಜನರಿಗೆ ಉದ್ಯೋಗಾವಕಾಶಗಳು ದೊರೆಯುವಂತೆ ಯೋಜನೆಗಳನ್ನು ರೂಪಿಸಬೇಕು ಎಂದು ಸೂಚಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಎಚ್.ಡಿ.ಕೋಟೆ ತಾಲೂಕು ಹಾಗೂ ಸರಗೂರು ತಾಲೂಕುಗಳು ಹಿಂದುಳಿದಿವೆ. ತಾಲೂಕು ವಿಸ್ತೀರ್ಣದಲ್ಲಿ ದೊಡ್ಡದಿದೆ. ವಿಸ್ತೀರ್ಣದ ಆಧಾರದ ಮೇಲೆ ನಮಗೆ ಅನುದಾನ ನೀಡಬೇಕು. ತಾಲೂಕಿನಲ್ಲಿ 300 ಹಳ್ಳಿಗಳು ಇವೆ. ಆದರೆ ನಮ್ಮಲ್ಲಿ 70 ಕೆಎಸ್‌ಆರ್‌ಟಿಸಿ ಬಸ್‌ಗಳ ಮಾತ್ರ ಇವೆ. ಅವು ಕೂಡ ಹಳೆಯದಾಗಿವೆ. ತಾಲೂಕಿನ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳೂ ಖಾಲಿ ಇವೆ. ಯಾವುದೇ ಹಳ್ಳಿಗಳಿಗೆ ಸಮರ್ಪಕವಾಗದ ಸಂಪರ್ಕ ರಸ್ತೆಗಳು ಇಲ್ಲವಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಹಾಡಿ ಜನರು ವಾಸ ಮಾಡುತ್ತಿದ್ದಾರೆ. ಆದ್ದರಿಂದ ಎಚ್.ಡಿ.ಕೋಟೆ ಹಾಗೂ ಹಾಗೂ ಸರಗೂರು ತಾಲೂಕಿನ ಅಭಿವದ್ಧಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು ಎಂದು ಸಮಿತಿಗೆ ಮಾಹಿತಿ ನೀಡಿದರು.
ಸಮಿತಿ ಸದಸ್ಯ ಪ್ರೊ.ಸೂರ್ಯನಾರಾಯಣ್ ಮಾತನಾಡಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಈ ಭಾಗದಲ್ಲಿ ಅಭಿವೃದ್ಧಿ ಹೊಂದಿರುವ ಜಿಲ್ಲೆಗಳಾಗಿವೆ. ಆದರೂ ಉಡುಪಿ ಜಿಲ್ಲೆಯ ಬ್ರಹ್ಮಾವರದ ಹಲವು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳು ಇಲ್ಲ. ಈ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಉತ್ತಮ ಶಿಕ್ಷಣ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚಿಸಿದರು.
ಸಮಿತಿ ನಿರ್ದೇಶಕ ಚಂದ್ರಶೇಖರಯ್ಯ ಮಾತನಾಡಿದರು. ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು, ಪ್ರತಿನಿಧಿಗಳು ಹಾಗೂ ಮೈಸೂರು ವಿಭಾಗದ ಜಿಲ್ಲೆಗಳ ಅಧಿಕಾರಿಗಳು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಸಭೆಗೆ ತಿಳಿಸಿದರು.
ಸದಸ್ಯ ಡಾ.ಎಸ್.ಟಿ.ಬಾಗಲಕೋಟಿ, ಅಧಿಕಾರಿಗಳಾದ ಡಾ. ಆರ್.ವಿಶಾಲ್, ಯುಕೇಶ್ ಕುಮಾರ್ ಇತರರು ಇದ್ದರು.