ಎನ್.ಆರ್.ಪುರ: ಪ್ರಸ್ತುತ ದಿನಗಳಲ್ಲಿ ಹಿಂದು ಸಮಾಜ ಬಾಂಧವರು ಸಂಘಟಿತರಾಗುವುದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಹಿಂದು ಧರ್ಮದ ಬಗ್ಗೆ ಕಳಂಕ ತರುವಂತಹ ಸಮಾಜಘಾತುಕ ಕೃತ್ಯಗಳು ಹೆಚ್ಚುತ್ತವೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ತಿಳಿಸಿದರು.
ಭಾನುವಾರ ರಾತ್ರಿ ಹಿಂದು ಮಹಾ ಗಣಪತಿ ಮಹೋತ್ಸವ ಆಶ್ರಯದಲ್ಲಿ ನಡೆದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸ್ವಾವಲಂಬನೆ, ಸಂಘಟನೆ, ಸೇವೆಯ ಗುರಿ ಇಟ್ಟುಕೊಂಡು ಕಳೆದ ಮೂರು ವರ್ಷದಿಂದ ಹಿಂದು ಮಹಾ ಗಣಪತಿ ಪ್ರತಿಷ್ಠಾಪಿಸಿದ್ದೇವೆ. ಹಿಂದು ಮಹಾ ಗಣಪತಿ ಮಹೋತ್ಸವ ಆಚರಣೆಯಿಂದ ಯುವಕರಲ್ಲಿ ರಾಷ್ಟ್ರ ಪ್ರಜ್ಞೆ ಬೆಳೆಯಲಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾರಂಭವಾಗಿ 100 ವಷರ್ ತುಂಬಿದೆ. ವಿಶ್ವ ಹಿಂದು ಪರಿಷತ್ ಸ್ಥಾಪನೆಯಾಗಿ 60 ವರ್ಷ ಕಳೆದಿದೆ. ನಮಗೆ ಹಿಂದು ಎನ್ನಲು ಹೆಮ್ಮೆ ಇದೆ. ಆದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನ ಸಭೆಯಲ್ಲಿ ಮಾತೃಭೂಮಿ, ಭಾರತಮಾತೆ, ದೇಶವನ್ನು ಗೌರವಿಸುವ ಆರ್‌ಎಸ್‌ಎಸ್ ಗೀತೆ ಹಾಡಿರುವುದು ಅದ್ಭುತ ಕ್ಷಣವಾಗಿತ್ತು. ಆದರೆ ನಂತರ ಕ್ಷಮೆ ಕೇಳಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ಹಿಂದು ಮಹಾ ಗಣಪತಿ ಸಮಿತಿ ಅಧ್ಯಕ್ಷರಾದ ಡಿ.ಎನ್.ಅಶ್ವನ್ ಮಾತನಾಡಿ, ಕೆಲವು ಶಕ್ತಿಗಳು ಧರ್ಮಸ್ಥಳಕ್ಕೆ ಅಪಮಾನ ಮಾಡಿದ್ದಾರೆ. ಆದರೆ ಸತ್ಯಕ್ಕೆ ಜಯವಾಗಿದೆ. ಈ ವಷರ್ ಹಿಂದು ಮಹಾ ಗಣಪತಿ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆ, ರಕ್ತದಾನ ಶಿಬಿರ, ಕುಟುಂಬ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಸಭೆಯಲ್ಲಿ ಹಿಂದು ಮಹಾ ಗಣಪತಿ ಸಮಿತಿಯ ಪೂರ್ವಾಧ್ಯಕ್ಷ ಹಂಚಿನಮನೆ ರಾಘವೇಂದ್ರ, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಕೋಣನಕೆರೆ ಸತ್ಯನಾರಾಯಣ, ವಿಶ್ವ ಹಿಂದು ಮಹಾ ಗಣಪತಿ ಸಮಿತಿಯ ಉಪಾಧ್ಯಕ್ಷರಾದ ಎನ್.ಎಂ.ಕಾಂತರಾಜ್, ಸುಂಕದಕಟ್ಟೆ ಅಕ್ಷತ್, ಸವಿತಾ ರತ್ನಾಕರ, ರಶ್ಮಿ ದಯಾನಂದ್ ಇದ್ದರು.
ಬೆಂಗಳೂರಿನ ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ, ಹಾಸ್ಯ ನಟರಾದ ಟೆನಿಸ್‌ಕೃಷ್ಣ, ಕಾಮಿಡಿ ಖ್ಯಾತಿಯ ಮುದ್ದು ಕೃಷ್ಣ, ಕಿರುತೆರೆ ಹಾಸ್ಯ ನಟಿ ಚಂದ್ರಪ್ರಭ, ಕೆ.ಆರ್.ಪೇಟೆ ಶಿವರಾಜ್ ಮತ್ತಿತರ ಕಲಾವಿದರಿಂದ ಹಾಸ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.