ಚಿತ್ರದುರ್ಗ: ರಾಜ್ಯ ಅಷ್ಟೇ ಅಲ್ಲದೆ, ದೇಶದ ಗಮನ ಸೆಳೆದಿರುವ ಕೋಟೆನಗರಿಯ ಹಿಂದು ಮಹಾಗಣಪತಿ ಶೋಭಾಯಾತ್ರೆಯೂ ಸೆ. 28ರಂದು ಅದ್ದೂರಿಯಾಗಿ ಜರುಗಲಿದೆ ಎಂದು ಮಹೋತ್ಸವ ಸಮಿತಿ ಅಧ್ಯಕ್ಷ ನಯನ್ ತಿಳಿಸಿದರು.
ಸ್ವಾಮಿಯ ಮೂರ್ತಿ ಪ್ರತಿಷ್ಠಾಪಿಸಿರುವ ಧರ್ಮಶ್ರೀ ಮಂಟಪದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊರ ರಾಜ್ಯ-ಜಿಲ್ಲೆಗಳಿಂದ ಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
ಮಾರ್ಗದರ್ಶಕ ಬದರಿನಾಥ್ ಮಾತನಾಡಿ, ಶೋಭಾಯಾತ್ರೆ ಅಂಗವಾಗಿ ಇಡೀ ಕೋಟೆನಗರಿ ಕಳೆಗಟ್ಟಿದ್ದು, ಪ್ರಮುಖ ವೃತ್ತಗಳನ್ನು, ಸಾಗುವ ಮಾರ್ಗದುದ್ದಕ್ಕೂ ವಿದ್ಯುದ್ದೀಪಾಲಂಕಾರದಿಂದ ಸಿಂಗರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿ 150 ಚೆಂಡೆ ಕಲಾವಿದರು, ತ್ರ್ಯಾಶ್ ಸೇರಿ 9 ಕಲಾತಂಡಗಳು ಭಾಗವಹಿಸುತ್ತಿವೆ. ಅದರಲ್ಲಿ 5 ಸ್ಥಳೀಯ ಕಲಾತಂಡಗಳಿಗೂ ಅವಕಾಶ ಕಲ್ಪಿಸಲಾಗಿದೆ. ಸ್ವಯಂ ಪ್ರೇರಣೆಯಿಂದ ಪ್ರಸಾದಕ್ಕೂ ಅನೇಕರು ಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎಂದರು.
ಶೋಭಾಯಾತ್ರೆ ಶಾಂತಿ-ಸುವ್ಯವಸ್ಥಿತವಾಗಿ ನಡೆಯಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಗತ್ಯ ಸಹಕಾರ ನೀಡುತ್ತಿದ್ದು, ಬಿಗಿ ಭದ್ರತೆ ಕೈಗೊಳ್ಳಲಿದೆ. ವ್ಯವಸ್ಥಿತವಾಗಿ ಯಶಸ್ವಿಗೊಳಿಸಲು ನಮ್ಮ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಮಾತನಾಡಿ, ಇಡೀ ನಗರ ಕೇಸರಿ ಹೊದ್ದು, ಕಂಗೊಳಿಸುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ನಿರೀಕ್ಷೆಗೂ ಮೀರಿ ಮಹಾಗಣಪನ ಭಕ್ತರು ಸೇರುವ ನಿರೀಕ್ಷೆ ಇದೆ ಎಂದರು.
28ರಂದು ಶೋಭಾಯಾತ್ರೆಗೆ ಬಜರಂಗದಳ ರಾಷ್ಟ್ರೀಯ ಸಂಯೋಜಕ ನೀರಜ್ ದೊನೇರಿಯಾ ಚಾಲನೆ ನೀಡುವರು. ನಾಡಿನ ವಿವಿಧ ಮಠಾಧೀಶರು ನೇತೃತ್ವ ವಹಿಸುವರು. ಪೂರಿ ಜಗನ್ನಾಥ ಸನ್ನಿಧಿಯ ಮಾದರಿ, ಬಾವುಟ, ಮೂರು ಹಾರಗಳ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದರು.
ಬೃಹತ್ ಬೈಕ್ ರ್ಯಾಲಿ ಸೆ. 26ಕ್ಕೆ: ಮಹಾಗಣಪನ ಅದ್ದೂರಿ ಶೋಭಾಯಾತ್ರೆ ಅಂಗವಾಗಿ ವಿಎಚ್‌ಪಿ, ಬಜರಂಗದಳದಿಂದ ಆಯೋಜಿಸಿರುವ ಬೃಹತ್ ಬೈಕ್ ರ್ಯಾಲಿಗೆ ಸೆ. 26ರಂದು ಬೆಳಗ್ಗೆ 10ಕ್ಕೆ ಕನಕ ವೃತ್ತದ ಮುಂಭಾಗ ಚಾಲನೆ ದೊರೆಯಲಿದೆ. ವಿವಿಧ ಮಠಾಧೀಶರು ಸಾನಿಧ್ಯ ವಹಿಸಲಿದ್ದು, ಜಗನ್ನಾಥ ಶಾಸ್ತ್ರೀ ಉದ್ಘಾಟಿಸಲಿದ್ದಾರೆ. 500ರಿಂದ 1ಸಾವಿರ ಬೈಕ್ ಸವಾರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಭಂಜನ್ ತಿಳಿಸಿದರು.
ವಕೀಲ ವಿಶ್ವನಾಥಯ್ಯ, ವಿಎಚ್‌ಪಿ ಜಿಲ್ಲಾಧ್ಯಕ್ಷ ಷಡಕ್ಷರಪ್ಪ, ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್, ಬಿಜೆಪಿ ಮುಖಂಡ ಉಮೇಶ್ ಕಾರಜೋಳ, ಕೇಶವ್ ಇತರರಿದ್ದರು.