ಕಡೂರು: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿ ವಿಸರ್ಜನಾ ಮಹೋತ್ಸವದ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಸಾವಿರಾರು ಜನಸ್ತೋಮದ ನಡುವೆ ನಡೆಯಿತು.
ವಿಘ್ನೇಶ್ವರನ ಆಸ್ಥಾನ ಮಂಟಪದಲ್ಲಿ ದಶಮಾನೋತ್ಸವದ ವಿಶೇಷವಾಗಿ ಪ್ರತಿದಿನ ವಿಶೇಷ ಪೂಜೆ, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಗಣಹೋಮ, ಅನ್ನಸಂತರ್ಪಣೆ ನಡೆಸಲಾಗಿತ್ತು.
ಗುರುವಾರ ಮಧ್ಯಾಹ್ನ 4ರ ಸುಮಾರಿಗೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಂಟಪದಿಂದ ಹೊರತಂದು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಲಾಯಿತು. ಮಂಗಳೂರಿನಿಂದ ಕರೆಸಲಾಗಿದ್ದ ಚಂಡೆಮೇಳ, ಡಿಜೆ ಸದ್ದಿಗೆ ಯುವಜನರು ಕುಣಿದರು. ಚಿತ್ರ ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಮುಖವಾಡದ ಬೃಹತ್ ತಟ್ಟಿರಾಯ ಪ್ರಮುಖ ಆಕರ್ಷಣೆಯಾಗಿತ್ತು. ಯುವಕರಿಗೆ ಮತ್ತು ಯುವತಿಯರಿಗೆ ಪ್ರತ್ಯೇಕ ಡಿಜೆ ತರಿಸಿ, ಹೆಣ್ಣುಮಕ್ಕಳಿಗೆ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಿ ಅವರು ಕುಣಿಯುತ್ತ ಸಾಗಲು ಅನುವು ಮಾಡಿಕೊಡಲಾಯಿತು. ಪಟ್ಟಣದ ಮುಸ್ಲಿಮರು ನೀರು ವಿತರಿಸಿ ಸೌಹಾರ್ದ ಮೆರೆದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ವಿಸರ್ಜನಾ ಮಹೋತ್ಸವವನ್ನು ಕಣ್ತುಂಬಿಕೊಂಡರು.
ಪಟ್ಟಣದ ಮುಖ್ಯರಸ್ತೆಯಲ್ಲಿ ಒಂದು ಬದಿ ಗಣಪತಿ ಮೂರ್ತಿಯ ಮೆರವಣಿಗೆ ಸಾಗಲು ಅನುವು ಮಾಡಿಕೊಡಲಾಗಿತ್ತು. ಇನ್ನೊಂದು ಬದಿ ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ಕಲ್ಪಿಸಿದ್ದರು. ಬಿ.ಎಚ್.ರಸ್ತೆ ಹಾದು ಕೆ.ಎಂ.ರಸ್ತೆ ಮೂಲಕ ಜೈನ್ ಟೆಂಪಲ್ ರಸ್ತೆ, ಪುರಸಭೆ ಮುಂಭಾಗ, ಅಲ್ಲಿಂದ ಎಂ.ಎಸ್.ಆರ್ ಸರ್ಕಲ್ ದಾಟಿ ಎಮ್ಮೆದೊಡ್ಡಿ ವೃತ್ತ, ಸುಭಾಷ ನಗರದ ಮೂಲಕ ಗಣಪತಿಯ ಮೆರವಣಿಗೆಯು ಹೊಸಳ್ಳಿಯ ಕಲ್ಯಾಣಿ ಕಡೆಗೆ ಸಾಗಿ ಕಲ್ಯಾಣಿಯಲ್ಲಿ ತಡರಾತ್ರಿ ಜಲಸ್ತಂಭನಗೊಳಿಸಲಾಯಿತು.