ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಈ ಹಿಂದೆ ಮುಡಾ ಆಯುಕ್ತರಾಗಿದ್ದ ಪಾಲಯ್ಯ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮೈಸೂರಿನ ದಿವಾನ್ಸ್ ರಸ್ತೆಯ ಲೋಕಾಯುಕ್ತ ಕಚೇರಿಯಲ್ಲಿ ಬುಧವಾರ ಪಾಲಯ್ಯ ಅವರನ್ನು ಎರಡನೇ ಬಾರಿಗೆ ಮುಡಾ ಹಗರಣ ಸಂಬಂಧ ವಿಚಾರಣೆ ನಡೆಸಲಾಯಿತು.
ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತನಿಖಾ ತಂಡ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೆಸರೆ ಗ್ರಾಮದ ಸರ್ವೇ ನಂ.464 ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಹೊಂದಿದ್ದ 3.16 ಎಕರೆ ಜಾಗದ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿದ್ದಾರೆ.
ಪಾಲಯ್ಯ ಅವರು ಮೈಸೂರಿನ ಎಡಿಸಿ ಆಗಿದ್ದ ಅವಧಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾವಮೈದ ಮಲ್ಲಿಕಾರ್ಜುನಸ್ವಾಮಿಗೆ ದೇವರಾಜು ಭೂಮಿ ಮಾರಾಟ ಮಾಡಿದ್ದರು. ಈ ಸಂಬಂಧ ಈಗಾಗಲೇ ಪಾಲಯ್ಯ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿವಾದಿತ ಜಾಗದ ಸಂಬಂಧ ಮೂಲ ಮಾಲೀಕರು, ಯಾರಿಂದ ಯಾರಿಗೆ ಮಾರಾಟವಾಯಿತು, ಮಲ್ಲಿಕಾರ್ಜುನ ಸ್ವಾಮಿ ಭೂಮಿಯನ್ನು ಯಾವಾಗ ಖರೀದಿಸಿದರು, ಬಳಿಕ ಪಾರ್ವತಿ ಅವರಿಗೆ ಜಾಗ ಯಾವಾಗ ಹಸ್ತಾಂತರವಾಯಿತು ಸೇರಿದಂತೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಾರೆ.
ಸರ್ವೇ ನಂ.464ರ ಜಾಗದ ಸಂಬಂಧ ದಾಖಲೆ ಪರಿಶೀಲನೆ ನಡೆಸದೆ ಶಿಫಾರಸು ಮಾಡಿರುವ ಆರೋಪ ಪಾಲಯ್ಯ ಅವರ ಮೇಲೆ ಕೇಳಿಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಬದಲಿ ನಿವೇಶ ಕೇಳಿ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಪಾಲಯ್ಯ ಮುಡಾ ಆಯುಕ್ತರಾಗಿದ್ದರು ಎನ್ನಲಾಗಿದೆ.