ರಾಹುಲ್ ಶಿಂಧೆ, ಜಿಪಂ ಸಿಇಒ ವಿಜಯಪುರ  
ನ್ಯೂಸ್

ಹಾಸ್ಟೆಲ್‌ಗಳಲ್ಲಿ ಸೀಲಿಂಗ್ ಫ್ಯಾನ್ ತೆಗೀರಿ - ಜಿಪಂ ಸಿಇಒ ರಾಹುಲ ಶಿಂಧೆ

ಬೆಳಗಾವಿ: ಸರ್ಕಾರದ ಎಲ್ಲ ವಿದ್ಯಾರ್ಥಿನಿಲಯಗಳಲ್ಲಿ ಸೀಲಿಂಗ್ ಫ್ಯಾನ್ ತೆಗೆದುಹಾಕಿ ಗೋಡೆ ಫ್ಯಾನ್ ಅಳವಡಿಸಿಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಖಡಕ್ಕಾಗಿ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ಹಾಸ್ಟೆಲ್‌ಗಳಲ್ಲಿ ಕಮಿಟಿ ರಚಿಸಿ ಸಭೆ ನಡೆಸಬೇಕು. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಸೂಚಿಸಿದರು.

ಬಾಲ್ಯ ವಿವಾಹ ತಡೆ ಕುರಿತು ಎಲ್ಲ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಕ್ರಮ ವಹಿಸಬೇಕು. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಆಹಾರ ವಿತರಿಸಬೇಕು. ವಸತಿ ನಿಲಯಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲು ನಿರ್ಲಕ್ಷಿಸಿದರೆ ಕ್ರಮ ವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿರುವ ಪೌಷ್ಟಿಕ ಪುನರ್ವಸತಿ ಕೇಂದ್ರ (ಎನ್‌ಆರ್‌ಸಿ) ಗಳಲ್ಲಿ ತೀವ್ರ ಅಪೌಷ್ಟಿಕ ಮಕ್ಕಳನ್ನು ದಾಖಲಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆ ಮತ್ತು ಅಂಗನವಾಡಿಗಳಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಪ್ರವೇಶ ನೀಡಬೇಕು. ಕಾವಲು ಸಮಿತಿ ಸಭೆ ಮತ್ತು ಪಾಲಕ- ಪೋಷಕ ಸಭೆಗಳನ್ನು ಮಾಸಿಕವಾಗಿ ನಿರ್ವಹಿಸಬೇಕು. ಮಕ್ಕಳಿಗೆ ಮಾನಸಿಕ ಆರೋಗ್ಯದ ಸಂಬಂಧ ಆಪ್ತಸಮಾಲೋಚನೆ ನಡೆಸಬೇಕು. ಶಾಲೆ ಮತ್ತು ಅಂಗನವಾಡಿಗಳಲ್ಲಿ ಹಾಜರಾತಿ ಸರಿಯಾಗಿ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್‌ಕುಮಾರ್ ಎಂ.ಎನ್., ಜಿಲ್ಲಾ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕಾಂಚನಾ

ಅಮಠೆ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಇತರರಿದ್ದರು.