ನ್ಯೂಸ್

ಹಾಲು ಖರೀದಿ ದರ 35ರೂ.ಗೆ ಏರಿಸಿ

ಕೋಲಾರ: ಹಾಲು ಖರೀದಿ ದರ ಕನಿಷ್ಠ 35 ರೂ.ಗೆ ಏರಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ನಗರದ ಕೋಚಿಮುಲ್​ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್​.ಮಹೇಶ್​ಗೆ ಬುಧವಾರ ಮನವಿ ಸಲ್ಲಿಸಿದರು.

ನೌಕರರ ಸಂಘದ ಅಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್​ ಮಾತನಾಡಿ, ಹಾಲಿನ ಖರೀದಿದರ ಪ್ರಸ್ತುತ 27 ರೂ.ಗಳಿದ್ದು, ಕನಿಷ್ಠ 35 ರೂ.ಗೆ ಏರಿಸಬೇಕು. ಸಂಘಗಳ ನಿರ್ವಹಣೆ ವೆಚ್ಚ ಲೀಟರ್​ಗೆ ಒಂದು ರೂ. ನಿಗದಿ ಪಡೆಸಬೇಕು. ಒಕ್ಕೂಟದಿಂದ ಸಂಘಗಳಿಗೆ ನೀಡುವ ವಾರದ ಬಿಲ್ಲನ್ನು ನಿಗದಿತ ಅವಧಿಯೊಳಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.

ಡೀಸೆಲ್​, ವಿದ್ಯುತ್​ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಬಿಎಂಸಿ ನಿರ್ವಹಣೆ ವೆಚ್ಚವನ್ನು ಸಮರ್ಥ್ಯಕ್ಕೆ ಅನುಗುಣವಾಗಿ 70, 75, ಮತ್ತು 80 ಪೈಸೆಗಳಿಗೆ ಏರಿಕೆ ಮಾಡ ಬೇಕು. ನಿವೃತ್ತಿ ಧನವನ್ನು ಬಮುಲ್​ನಲ್ಲಿ ನೀಡುವಂತೆ ಸಹಾಯಕರಿಗೆ 2 ಲಕ್ಷ ರೂ., ಪರೀಕ್ಷಕರಿಗೆ 3 ಲಕ್ಷ ರೂ., ಕಾರ್ಯದರ್ಶಿಗಳಿಗೆ 5 ಲಕ್ಷ ರೂ. ನೀಡಬೇಕು ಎಂದು ಆಗ್ರಹಿಸಿದರು.

ಡೇರಿಗಳಿಗೆ ನೀಡುವ ವೇತನ, ಬಿಎಂಸಿ ಭತ್ಯೆಗಳನ್ನು ಒಕ್ಕೂಟದ ಸುತ್ತೋಲೆಯಂತೆ ನೇರ ಬ್ಯಾಂಕ್​ ಖಾತೆಗೆ ಜಮೆ ಮಾಡಬೇಕು. ಬಿಎಂಸಿ ಕೇಂದ್ರಗಳಲ್ಲಿ ಸಿಎಲ್​ಆರ್​ 28+ ಬಂದಾಗ 28 ಸಿಎಲ್​ಆರ್​ ನೀಡುತ್ತಿದ್ದು ನಷ್ಟ ತಡೆಯಲು 28.5 ಸಿಎಲ್​ಆರ್​ ನೀಡಬೇಕು. ಎಲ್ಲ ಬೇಡಿಕೆ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈಡೇರಿಸಬೇಕು. ಇಲ್ಲವಾದರೆ ಒಕ್ಕೂಟದ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಲೀಟರ್​ ಹಾಲಿಗೆ 27 ರೂ. ನಿಗದಿಪಡಿಸಿ, ಒಕ್ಕೂಟವು 40ರೂ.ಗೆ ಮಾರಾಟ ಮಾಡುತ್ತಿದೆ. 13 ರೂ.ಲಾಭ ಪಡೆಯುತ್ತಿದೆ. ಮರಣ ದತ್ತಿ ನಿಧಿಯನ್ನು ಕನಿಷ್ಠ ಸಾವಿರ ರೂ.ಗೆ ನಿಗದಿ ಪಡಿಸಬೇಕು. 13,600 ಸಿಬ್ಬಂದಿ, 85 ಸಾವಿರ ಹಾಲು ಉತ್ಪಾದಕರು ಇದ್ದು ರೈತರ ಬ್ಯಾಂಕ್​ ಖಾತೆಗಳಿಗೆ ಪ್ರತಿ ತಿಂಗಳು 15ರೊಳಗೆ ಬಿಲ್​ಗಳನ್ನು ಜಮೆ ಮಾಡಬೇಕು. ಡೇರಿಗಳು ಬಿಎಂಸಿಗೆ ನಿರ್ವಾಹಣೆ ಬಿಟ್ಟುಕೊಟ್ಟ ಮೇಲೆ ಲಾಭಾಂಶ ಕಡಿಮೆಯಾಗಿದೆ. ನೂರಿನ್ನೂರು ರೂ.ಗೆ ನೌಕರರು ದುಡಿಯಬೇಕಾಗಿದೆ. ಆದರೂ ಒಕ್ಕೂಟಕ್ಕೆ ಸಹಕರಿಸುತ್ತಿದ್ದೇವೆ. 15 ವರ್ಷದಿಂದ ನಿರ್ವಹಣೆ ವೆಚ್ಚ 35 ಪೈಸೆಯಿದ್ದು, ಏರಿಕೆ ಮಾಡಬೇಕಿದೆ ಎಂದರು.

ಕೋಚಿಮುಲ್​ ವ್ಯವಸ್ಥಾಪಕ ಡಾ. ಶ್ರೀನಿವಾಸಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಬಗಲಹಳ್ಳಿ ನಾಗೇಶ್​ಗೌಡ, ಗೌರವಾಧ್ಯಕ್ಷ ಚಿನ್ನಹಳ್ಳಿ ಗೋಪಾಲ್​, ಮುಖಂಡರಾದ ವಕ್ಕಲೇರಿ ನಾಗರಾಜ್​, ಮಾಲೂರು ಮುನಿರಾಜು, ಶ್ರೀರಂಗಪುರ ರವಿ, ಬಂಗಾರಪೇಟೆ ಮಂಜು ಇತರರಿದ್ದರು.