ಬೆಟ್ಟದಪುರ: ರಾಜ್ಯದ ಇತರ ಹಾಲಿನ ಒಕ್ಕೂಟಗಳಿಗೆ ಹೋಲಿಸಿದರೆ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಉತ್ಪಾದಕರಿಗೆ ಅತಿ ಹೆಚ್ಚಿನ ದರ ನೀಡುವ ಮೂಲಕ ಹೈನುಗಾರರ ಹಿತ ಕಾಯುತ್ತಿದೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಹೇಳಿದರು.
ಸಮೀಪದ ಬೆಟ್ಟದತುಂಗ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 36 ರೂ.ಗಳನ್ನು ನೀಡಲಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಅಧಿಕ ಆದಾಯ ಪಡೆದುಕೊಳ್ಳಿ. ಮೂರ‌್ನಾಲ್ಕು ವರ್ಷಗಳಿಂದ ಹಾಲಿಗೆ ದರ ಕಡಿಮೆ ಮಾಡದೆ ಏರಿಕೆ ಮಾಡಿಕೊಂಡೇ ಬರುತ್ತಿದ್ದೇವೆ ಎಂದರು.
ಒಕ್ಕೂಟದಿಂದ ದೊರೆಯುವ ವಿಮೆ ಸೌಲಭ್ಯ ಮತ್ತು ಸಬ್ಸಿಡಿ ದರದಲ್ಲಿ ಸಿಗುವ ಮಿಷನ್‌ಗಳನ್ನು ಬಳಕೆ ಮಾಡಿಕೊಳ್ಳಿ. ಜಿಲ್ಲೆಯಲ್ಲಿ ಕಳೆದ ಬಾರಿ 55 ಸಾವಿರ ಹಸುಗಳಿಗೆ ವಿಮೆ ಮಾಡಿಸಲಾಗಿತ್ತು. ಈ ಬಾರಿ ಇನ್ನಷ್ಟು ಹೆಚ್ಚಿನ ಹಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಿದ್ದೇವೆ. ಒಕ್ಕೂಟದಿಂದ ಉತ್ಪಾದಕರ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಮೈಸೂರಿನಲ್ಲಿ ಪ್ರಗತಿಯಲ್ಲಿರುವ ಹಾಸ್ಟೆಲ್ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಯನ್ನು ಆಹ್ವಾನಿಸಿ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದರು.
ಮೈಮುಲ್ ಹಿರಿಯ ವಿಸ್ತರಣಾಧಿಕಾರಿ ಬಿ.ಎಸ್.ನಿಶ್ಚಿತ್ ಮಾತನಾಡಿ, ಬೆಟ್ಟದತುಂಗ ಹಾಲು ಉತ್ಪಾದಕರ ಸಹಕಾರ ಸಂಘ 2022-23ನೇ ಸಾಲಿನಲ್ಲಿ 9,42,865 ರೂ. ನಿವ್ವಳ ಲಾಭ ಮಾಡಿದೆ. ಮುಂದಿನ ದಿನಗಳಲ್ಲಿ ಸಂಘ ಇದೇ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದರು.
ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಉತ್ಪಾದಕರು, 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಉತ್ಪಾದಕರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಟಿ.ನಟರಾಜು, ನಿರ್ದೇಶಕರಾದ ಎಸ್.ಗೋಪಾಲರಾಜೇ ಅರಸ್, ಕರೀಗೌಡ, ಸೂರೇಗೌಡ, ಟಿ.ಪುಟ್ಟರಾಜೇಅರಸ್, ಟಿ.ಜಿ ಸತೀಶರಾಜೇ ಅರಸ್, ಕೆ.ರಾಮೇಗೌಡ, ರಶ್ಮಿ, ಎಂ.ಮಹೇಶ್, ಜವರಯ್ಯ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ, ಮೈಮುಲ್ ನಿವೃತ್ತ ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಸಿ.ಸತೀಶ್, ವಿಸ್ತರಣಾಧಿಕಾರಿಗಳಾದ ಸತೀಶ್, ನಂದಿನಿ, ಕಾರ್ಯದರ್ಶಿ ಸವಿತಾ, ಸಿಬ್ಬಂದಿ ಶಾಂತಕುಮಾರ್, ಸ್ವಾಮಿ, ಚಂದ್ರಕಾಂತ್ ಇತರರು ಇದ್ದರು.