ಕಂಪಲಾಪುರ: ಹಾಲು ಉತ್ಪಾದಕರ ಹೆಣ್ಣು ಮಕ್ಕಳ ಉನ್ನತ ವ್ಯಾಸಂಗಕ್ಕೆ ಮೈಸೂರಿನಲ್ಲಿ ಅಂದಾಜು 18 ಕೋಟಿ ರೂ.ವೆಚ್ಚದಲ್ಲಿ 250 ಸುಸಜ್ಜಿತ ಕೊಠಡಿಗಳುಳ್ಳ ಹಾಸ್ಟೆಲ್ ನಿರ್ಮಾಣ ಮಾಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ತಿಳಿಸಿದರು.
ಶುಕ್ರವಾರ ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ಈ ಮೊದಲು ಒಕ್ಕೂಟದ ನಿರ್ದೇಶಕನಾಗಿದ್ದಾಗ ಪಿರಿಯಾಪಟ್ಟಣ ತಾಲೂಕಿನಲ್ಲಿ 40 ಸಾವಿರ ಲೀ ಹಾಲು ಪ್ರತಿದಿನ ಉತ್ಪಾದನೆಯಾಗುತ್ತಿತ್ತು . ಅಧ್ಯಕ್ಷನಾದ ನಂತರ ಪ್ರತಿನಿತ್ಯ 2 ಲಕ್ಷ ಲೀ ಹಾಲು ಉತ್ಪಾದನೆಯಾಗುತ್ತಿದೆ. ಲೀಟರ್ ಹಾಲಿಗೆ 25 ರೂ. ನಿಂದ 36 ರೂ.ಗೆ ಏರಿಸಲಾಗಿದೆ. ಅದರ ಕೀರ್ತಿಉತ್ಪಾದಕರಿಗೆ ಸಲ್ಲುತ್ತದೆ. ಬೇರೆ ಯಾವ ರಾಜ್ಯವೂ ನೀಡದ ದರವನ್ನು ನಮ್ಮ ಒಕ್ಕೂಟ ನೀಡುತ್ತಿದೆ. ಹಾಲು ಉತ್ಪಾದನೆಯಲ್ಲಿ ಗುಜರಾತ್ ಬಿಟ್ಟರೆ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ನನ್ನ ಅಧಿಕಾರವಧಿಯಲ್ಲಿ ಉತ್ಪಾದಕರ ಶ್ರೇಯೋಭಿವೃದ್ದಿಗೆ ಶ್ರಮಿಸುವುದಾಗಿ ಪ್ರಸನ್ನ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಪ್ರಕಾಶ್, ಲಕ್ಷ್ಮೀ, ಅತೀ ಹೆಚ್ಚು ಹಾಲು ಖರೀದಿ ಮಾಡಿದ ಎ.ಸಿ.ರಾಜಶೇಖರಯ್ಯ, ಕ್ಯಾಂಟೀನ್ ಮಂಜು ಅವರನ್ನು ಗೌರವಿಸಲಾಯಿತು.