ಹನಗೋಡು: ಹೋಬಳಿಯ ನೇರಳಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2022-23ನೇ ಸಾಲಿನಲ್ಲಿ 3,76,781 ರೂ. ನಿವ್ವಳ ಲಾಭಗಳಿಸಿದೆ ಎಂದು ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್ ತಿಳಿಸಿದರು.
ಸಂಘದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂಘವು ಈ ಸಾಲಿನಲ್ಲಿ 1,45,90,038 ರೂ. ವ್ಯವಹಾರ ನಡೆಸಿದ್ದು, 13,56,605 ರೂ. ವ್ಯಾಪಾರ ಲಾಭ ಗಳಿಸಿದೆ. ಈ ಪೈಕಿ ಆಡಳಿತ್ಮಾಕ ಹಾಗೂ ಸಿಬ್ಬಂದಿ ವೇತನ ಸೇರಿದಂತೆ ಇತರೆ ಖರ್ಚು ಕಳೆದು 3,76,781 ರೂ. ನಿವ್ವಳ ಲಾಭಗಳಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮೈಸೂರು ಹಾಲು ಒಕ್ಕೂಟವು ಈ ಹಿಂದೆ ಇಡೀ ದೇಶವನ್ನೇ ಕಾಡಿದ ಕರೋನ ಸಾಂಕ್ರಾಮಿಕ ಮಹಾಮಾರಿಯ ಸಂಕಷ್ಟ ಸಮಯದಲ್ಲೂ ನಮ್ಮ ಹೈನುಗಾರರ ಮೇಲೆ ಯಾವುದೇ ಪರಿಣಾಮ ಬೀರದಂತೆ ಒಕ್ಕೂಟವು ಮುನ್ನೆಚ್ಚರಿಕೆ ಕ್ರಮ ವಹಿಸಿತ್ತು. ಜತೆಗೆ ರೈತ ಹಾಗೂ ರಾಸುಗಳ ಹಿತ ಕಾಪಾಡುವುದರೊಂದಿಗೆ ಸಂಘಗಳ ಆದಾಯ ವೃದ್ಧಿಗೂ ಸಹಕಾರಿಯಾಗಿದ್ದು, ಸಂಘದ ಎಲ್ಲ ಸದಸ್ಯರು ತಮ್ಮ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದರೊಂದಿಗೆ ರಾಸುಗಳಿಗೂ ವಿಮೆ ಮಾಡಿಸುವಂತೆ ಕಿವಿಮಾತು ಹೇಳಿದರು.