ಎಚ್.ಡಿ.ಕೋಟೆ: ಪರಿಶಿಷ್ಟ ವರ್ಗಗಳ ಇಲಾಖೆ ವತಿಯಿಂದ ಸಿಗುವ ಸಾಲ ಸೌಲಭ್ಯಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘಕ್ಕೂ ನೀಡಲು ಕ್ರಮ ವಹಿಸುತ್ತೇನೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಭರವಸೆ ನೀಡಿದರು.
ತಾಲೂಕಿನ ಹೊಸಮಾಳ ಗ್ರಾಮದಲ್ಲಿ ಮೈಮುಲ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹಾಲು ಶೀತಲೀಕರಣ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲು ಹಾಲು ಉತ್ಪಾದಕರ ಸಂಘ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಮಹಿಳೆಯರ ಸಬಲೀಕರಣ ಅತಿ ಮುಖ್ಯ. ಹಾಗಾಗಿ ಇಲಾಖೆಯಿಂದ ಬರುವ ಎಲ್ಲ ರೀತಿಯ ನೆರವನ್ನು ಹಾಲು ಉತ್ಪಾದಕರ ಸಂಘಕ್ಕೆ ನೀಡಲಾಗುತ್ತದೆ. ಪ್ರತಿಯೊಬ್ಬ ಮಹಿಳೆಗೂ ಹಸುಗಳನ್ನು ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನನ್ನ ಅಧಿಕಾರ ಅವಧಿಯಲ್ಲಿ ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಿದ್ದೇನೆ. ನಾನು ಯಾವುದೇ ಜಾತಿ ರಾಜಕೀಯ ಮಾಡದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಹಾಲು ಪವಿತ್ರವಾದದ್ದು, ಹಾಲಿನಲ್ಲಿ ಜಾತಿ ರಾಜಕೀಯ ಬೆರೆಸಬಾರದು. ಹುಟ್ಟಿದ ಮಗುವಿನಿಂದ ವೃದ್ಧರವರೆಗೂ ಹಾಲು ಅವಶ್ಯಕವಾದದು. ತಾಲೂಕಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತದೆ. ಹಾಲು ಉತ್ಪಾದನೆ ಹೆಚ್ಚಾದಂತೆ ಯುವಕರಿಗೆ ಉದ್ಯೋಗ ಸಿಗುತ್ತದೆ. ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇನ್ನೂ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಮೈಮುಲ್ ನಿರ್ದೇಶಕ ಈರೇಗೌಡ ಮಾತನಾಡಿ, ನಾನು ನಿರ್ದೇಶಕ ಆಗುವುದಕ್ಕಿಂತ ಮುಂಚೆ ತಾಲೂಕಿನಲ್ಲಿ ಕೇವಲ 26 ಹಾಲು ಉತ್ಪಾದಕರ ಸಂಘಗಳು ಇದ್ದವು. ನಂತರದ ದಿನಗಳಲ್ಲಿ 178 ಸಂಘಗಳನ್ನು ಮಾಡಲಾಗಿದೆ. ಸಹಕಾರ ಸಂಘದಲ್ಲಿ ರಾಜಕೀಯ ಹಾಗೂ ಹಾಲಿನಲ್ಲಿ ನೀರು ಬೆರೆಸಬಾರದು ಎಂದು ತಿಳಿಸಿದರು.
ಹೊಸಮಾಳ ಗ್ರಾಮದಲ್ಲಿ 25ನೇ ಬಿಎಂಸಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ರೈತರಿಗೆ ಯಾವುದಾದರೂ ಸರ್ಕಾರ ನೇರವಾಗಿ ಸಹಾಯಧನ ನೀಡಿದೆ ಎಂದರೆ ಅದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಪ್ರಸ್ತುತ ರೈತರ ಅಭಿವೃದ್ಧಿ ಪರ ಸರ್ಕಾರ ಇದೆ. ಅದೇ ರೀತಿ ಶಾಸಕರು ಕೂಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡಕ್ಕೆ ಹೆಚ್ಚು ಅನುದಾನ ನೀಡಿ ಸಹಕಾರ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯರಾಮ, ಮೈಮುಲ್ ವ್ಯವಸ್ಥಾಪಕ ಡಾ.ದಿವಾಕರ್, ಎಚ್.ಸಿ.ನರಸಿಂಹಮೂರ್ತಿ, ಸುಬ್ರಹ್ಮಣ್ಯ, ಯಶೋದಾ, ಚಲುವರಾಜು, ಡಾ.ಮುಕುಂದ, ಆರೀಫ್ ಇಕ್ಬಾಲ್, ರಾಮಪ್ಪ ಬಾರ್ಕಿ, ಮಂಜು, ಬಿ.ಲಿಂಗೇಗೌಡ, ದೇವರಾಜು, ಬೈರೇಗೌಡ, ರವಿಕುಮಾರ್, ರವೀಂದ್ರ, ಕೃಷ್ಣ, ನಾಗರಾಜು, ಕುಮಾರ್, ಅಕ್ಕಮ್ಮ, ಕೆಂಪಮ್ಮ, ಪಾರ್ವತಿ ಇದ್ದರು.