ನ್ಯೂಸ್

ಹಾಲಿನ ಉತ್ಪನ್ನ ಮೇಲಿನ ಜಿಎಸ್​ಟಿ ರದ್ದುಗೊಳಿಸಿ

ಬೈಲಹೊಂಗಲ: ಆಹಾರ ಹಾಗೂ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್​ಟಿ ಹೇರಿಕೆ ಖಂಡಿಸಿ ಆಮ್​ ಆದ್ಮಿ ಪಕ್ಷದಿಂದ ಪ್ರತಿಭಟನೆ ನಡೆಸಿ, ಇವುಗಳ ಮೇಲಿನ ಜಿಎಸ್​ಟಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ತಾಲೂಕು ಆಮ್​ ಆದ್ಮಿ ಪಕ್ಷದ ಅಧ್ಯಕ್ಷ ಬಿ.ಎಂ.ಚಿಕ್ಕನಗೌಡರ ಮಾತನಾಡಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ದೇಶದ ಕೃಷಿ ಉತ್ಪಾದನೆಯಾದ ಆಹಾರ ಧಾನ್ಯಗಳ ಮತ್ತು ಹಾಲಿನ ಉತ್ಪನ್ನಗಳ ಮೇಲೆ ಜಿಎಸ್​ಟಿ ಹೇರಿಕೆ ಮಾಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಪೆಟ್ರೋಲ್​, ಡೀಸೆಲ್​ ಹಾಗೂ ಸಿಲಿಂಡರ್​ ದರ ಗಗನಕ್ಕೇರಿದ್ದು, ಇದರಿಂದ ಪ್ರತಿ ಕುಟುಂಬದ ಮೇಲೆ ಹೊರೆಯಾಗಿದೆ. ಇನ್ನೂ ದಿನ ಬಳಕೆಯ ವಸ್ತುಗಳ ಮೇಲೆ ಜಿಎಸ್​ಟಿ ಹೇರಿರುವುದು ಗ್ರಾಹಕರನ್ನು ದಿವಾಳಿಯಾಗಿಸುವ ಕ್ರಮ ಎಂದು ಆರೋಪಿಸಿದರು.

ಆನಂದ ಹಂಪನ್ನವರ, ದಯಾನಂದ ಚಿಕ್ಕಮಠ, ಮಹಾಂತೇಶ ಮೊರಬದ, ಸುರೇಶ ವಾಲಿ, ಪ್ರವಿಣ ರೇಣಕೆ, ವಿಜಯ ಚನ್ನನ್ನವರ, ಶಿವಪುತ್ರಯ್ಯ ಯರಗಂಬಳಿಮಠ, ಸಿದ್ದು ಬೆಳಗಾವಿ, ಮಹಾರುದ್ರಪ್ಪ ನೆಲ್ಲಿಗಣಿ, ಅಜ್ಜಪ್ಪ ಕುರಿ, ರಾಮನಗೌಡ ಪಾಟೀಲ ಇತರರಿದ್ದರು.

ಚನ್ನಮ್ಮನ ಕಿತ್ತೂರು ವರದಿ: ಜಿಎಸ್​ಟಿ ಹೇರಿಕೆ ಖಂಡಿಸಿ ಆಮ್​ ಆದ್ಮಿ ಕಾರ್ಯಕರ್ತರು ಸೋಮಲಿಂಗಪ್ಪ ಹಾಲಗಿ ತಹಸೀಲ್ದಾರ್​ ಮೂಲಕ ಪ್ರಧಾನ ಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು. ಆಹಾರ ಧಾನ್ಯಗಳು ಮತ್ತು ಪ್ಯಾಕ್​ ಆಗಿರುವ ಕ್ಷೀರೋತ್ಪನ್ನಗಳ ಮೇಲೆ ಹಾಗೂ ಸೋಲಾರ್​ ವಾಟರ್​ ಹೀಟರ್​ ಸೇರಿದಂತೆ ದಿನ ಬಳಕೆ ವಸ್ತುಗಳ ಮೇಲೆ ಜಿಎಸ್​ಟಿ ಹೇರಿಕೆ ಖಂಡನೀಯ. ಇದರಿಂದ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಪೆಟ್ರೋಲ್​, ಡೀಸೆಲ್​ ಮೇಲೆ ಹೆಚ್ಚಿನ ತೆರಿಗೆ ವಿ-ಧಿಸಿರುವುದು ಗ್ರಾಹಕರಿಗೆ ಹೊರೆಯಾಗಿದೆ. ಆಮ್​ ಆದ್ಮಿ ಈ ಕ್ರಮವನ್ನು ಖಂಡಿಸುತ್ತದೆ. ಕೇಂದ್ರ ಸರ್ಕಾರ ಜಿಎಸ್​ಟಿ ಏರಿಕೆ ಹಿಂಪಡೆಯದಿದ್ದರೆ, ಬರುವ ದಿನಗಳಲ್ಲಿ ದೇಶಾದ್ಯಂತ ಆಮ್​ ಆದ್ಮಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಆಮ್​ ಆದ್ಮಿ ಮುಖಂಡ ಆನಂದ ಹಂಪಣ್ಣವರ, ಪ್ರಧಾನ ಕಾರ್ಯದರ್ಶಿ ವಿಠ್ಠಲ ಮಿರಜಕರ, ಸಂಟನಾ ಕಾರ್ಯದರ್ಶಿ ರಾಮನಗೌಡ ಪಾಟೀಲ, ನಾಗನಗೌಡ ಪಾಟೀಲ, ವೀರಭದ್ರ ತುರುಮರಿ, ನಾಮದೇವ ರೇಳೆಕರ, ಚಂದ್ರಶೇಖರ ಹಡಪದ, ವಿನಾಯಕ ಪತಂಗೆ ಇತರರು ಇದ್ದರು.