ನ್ಯೂಸ್

ಹಾಡು ಹಗಲೇ ಮದ್ಯಪಾನ ಮಾಡುತ್ತಿದ್ದ ಶಿಕ್ಷಕನ ಅಮಾನತ್ತು / ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮದ್ಯಪಾನದ ವಿಡಿಯೋ ವೈರಲ್ / ಅಮಾನತ್ತುಗೊಳಿಸಿದ ಡಿಡಿಪಿಐ

ವಿಜಯವಾಣಿ ಸುದ್ದಿಜಾಲ ಕೋಲಾರ

ಹಾಡು ಹಗಲೇ ಶಿಕ್ಷಕನೊಬ್ಬ ಪಾನಗೋಷ್ಠಿಯಲ್ಲಿ ಭಾಗವಹಿಸಿದ್ದಾನೆಂದು ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿಕ್ಷಕನನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಶಿಕ್ಷಕ ಶ್ರೀನಿವಾಸಗೌಡ ಎಂಬುವವನು ಅಮಾನತ್ತಿಗೆ ಗುರಿಯಾಗಿದ್ದು, ಮಂಗಳವಾರ ಅಮಾನತ್ತುಗೊಂಡಿರುವ ಶಿಕ್ಷಕ ಮತ್ತು ನಿವೃತ್ತಿ ಶಿಕ್ಷಕ ಇಬ್ಬರು ಹಾಡು ಹಗಲೇ ಪಾನಗೋಷ್ಠಿಯಲ್ಲಿ ಭಾಗವಹಿಸಿರುವ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಶಿಕ್ಷಕನನ್ನು ಬುಧವಾರ ಸಂಜೆ ಡಿಡಿಪಿಐ ಕೃಷ್ಣಮೂರ್ತಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ಚುನಾವಣೆಯಲ್ಲಿ ಎಲ್ಲಾ ತಾಲ್ಲೂಕುಗಳಿಂದ ಶಿಕ್ಷಕರ ಕ್ಷೇತ್ರದಿಂದಲೂ ನಿರ್ದೇಶಕರ ಆಯ್ಕೆ ಚುನಾವಣೆ ನಡೆಯಿತು. ಈ ಚುನಾವಣೆ ಯಾವುದೇ ಸಾರ್ವತ್ರಿಕ ಚುನಾವಣೆ ಮೀರಿಸುವಂತೆ ಆಸೆ ಅಮಿಷಗಳನ್ನು ಒಡ್ಡಿ ಮತದಾರರಿಂದ ಮತ ಪಡೆದು ಶಿಕ್ಷಕರ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆ ಆಗಿ ನೌಕರರ ಸಂಘಕ್ಕೆ ಆಯ್ಕೆ ಆಗಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶಿಕ್ಷಕರಲ್ಲಿ ಎರಡು ಗುಂಪುಗಳಾಗಿ ಅದು ರಾಜಕೀಯ ಪಕ್ಷಗಳನ್ನು ಮೀರಿಸುವಂತೆ ಪೈಪೋಟಿ ನಡೆದು ಶಿಕ್ಷಕರಲ್ಲಿಯೇ ಭಿನ್ನಮತ ಸೃಷ್ಟಿಸುವ ಹಂತಕ್ಕೆ ತಲುಪಿದ್ದು, ಜಿದ್ದಾಜಿದ್ದಿ ಈಗಲೂ ಮುಂದುವರೆಯುವAತೆ ಮಾಡಿದೆ.

ಮಂಗಳವಾರ ಪಾನಗೋಷ್ಠಿಯಲ್ಲಿ ಭಾಗವಹಿಸಿದ ಹಾಲಿ ಶಿಕ್ಷಕ ಹಾಗೂ ನಿವೃತ್ತ ಶಿಕ್ಷಕನ ಫೋಟೋ ವೈರಲ್ ಆಗಲು ಶಿಕ್ಷಕರ ಮತ್ತೊಂದು ಗುಂಪೇ ಕಾರಣ. ಮಾಧ್ಯಮದವರಿಗೆ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುವಂತೆ ಮತ್ತೊಂದು ಗುಂಪು ಎಲ್ಲಾ ರೀತಿಯ ಪ್ರೇರಣೆ ನೀಡಿದೆ ಎಂಬ ಆರೋಪ ಶಿಕ್ಷಕರ ವಲಯದಲ್ಲಿ ಕೇಳಿಬರುತ್ತಿದೆ.

ಕರ್ತವ್ಯಕ್ಕೆ ಹಾಜರಾದರೆ ರಜೆ ಹಾಕಿಕೊಂಡು ವೈಯುಕ್ತಿಕ ಕೆಲಸಗಳಲ್ಲಿ ಭಾಗವಹಿಸುವುದು ತಪ್ಪೇ. ಇದನ್ನೇ ಸಾಮಾಜಿಕ ಜಾಲ ತಾಣಗಳಿಗೆ ವೈರಲ್ ಮಾಡುವಂತಹ ಕೆಲಸ ನಡೆದಿದೆ ಎಂದು ಅಮಾನತ್ತಿಗೊಳಗಾಗಿರುವ ಶಿಕ್ಷಕ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ನೂರಾರು ವಿದ್ಯಾರ್ಥಿಗಳನ್ನು ತಿದ್ದುವಂತಹ ಶಿಕ್ಷಕರೇ ಹಗಲು ವೇಳೆಯಲ್ಲಿ ಸಾರ್ವಜನಿಕ ವಲಯಗಳಲ್ಲಿ ಪಾನಗೋಷ್ಠಿ ನಡೆಸುವುದು ತಪ್ಪಲ್ಲವೇ? ಎಂದು ಶಿಕ್ಷಕಲ್ಲಿ ಹಾಗೂ ಸಾರ್ವಜನಿಕರಲ್ಲಿ ಚರ್ಚೆಯಾಗತೊಡಗಿದೆ.

ಇಷ್ಟೆಲ್ಲಾ ರದ್ದಾಂತಕ್ಕೆ ಇತ್ತಿಚೆಗೆ ನಡೆದ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯೇ ಕಾರಣ. ಶಿಕ್ಷಕರಲ್ಲಿನ ಜಿದ್ದಾಜಿದ್ದಿ ಶಿಕ್ಷಕರ ಖಾಸಗಿ ಬದುಕಿನ ಮೇಲೆ ಪರಿಣಾಮ ಬಿದ್ದಿದ್ದು, ಇದರಿಂದ ಒಬ್ಬ ಶಿಕ್ಷಕ ಅಮಾನತ್ತಿಗೆ ಒಳಗಾಗುವಂತಾಗಿದೆ. ತಾಲ್ಲೂಕಿನಲ್ಲಿ ಇದೇ ರೀತಿ ಪಾನಗೋಷ್ಠಿ ನಡೆಸುವ ಅನೇಕ ಶಿಕ್ಷಕರು ಇದ್ದಾರೆ. ಹಾಗೂ ಶಾಲೆಗಳಿಗೆ ಹೋಗದೆ ರಾಜಕೀಯ ಮಾಡಿಕೊಂಡು ಬಡ್ಡಿ ವ್ಯವಹಾರದಲ್ಲಿ ತೊಡಗಿರುವಂತಹ ಶಿಕ್ಷಕರು ಇದ್ದಾರೆ. ಇನ್ನು ಮುಂದೆಯಾದರೂ ಇಂತಹುದಕ್ಕೆ ಕಡಿವಾಣ ಹಾಕಬೇಕಾಗಿದೆ. ಶಿಕ್ಷಕರೇ ತಾವು ಮಾಡುವ ತಪ್ಪುಗಳನ್ನು ತಿದ್ದಿಕೊಂಡು ಯಾರ ಕೈಲಿಯೂ ಹೇಳಿಸಿಕೊಳ್ಳದೇ ಮುನ್ನೆಡೆಯುವಂತಹ ಕೆಲಸ ಆಗಬೇಕಾಗಿದೆ ಎಂಬುದು ಸಾರ್ವಜನಿಕರಲ್ಲಿ ಚರ್ಚೆಯಾಗತೊಡಗಿದೆ.

ಕೋಟ್

ಶಾಲೆಗೆ ರಜೆ ಹಾಕಿ ನನ್ನ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ನನ್ನನ್ನು ತೇಜೋವಧೆ ಮಾಡುವ ದೃಷ್ಟಿಯಿಂದ ನನ್ನ ಶಿಕ್ಷಕರೇ ವಿಡಿಯೋ ಮಾಡಿ ವೈರಲ್ ಮಾಡುವಂತಹ ಕೆಲಸಕ್ಕೆ ಮುಂದಾಗಿದ್ದಾರೆ. ನಾನು ಒಂದು ಶಿಕ್ಷಕರ ಗುಂಪಿನ ಕಡೆ ಕೆಲಸ ಮಾಡಿದೆ ಎಂಬ ಕಾರಣಕ್ಕೆ ಈ ರೀತಿಯಾಗಿ ನನ್ನನ್ನು ತೇಜೋವಧೆ ಮಾಡುವಂತಹ ಕೆಲಸ ಮಾಡಿದ್ದಾರೆ. ಇಲಾಖೆ ನಡೆಸುವ ತನಿಖೆಯಲ್ಲಿ ನನಗೆ ನ್ಯಾಯ ಸಿಗಲಿದೆ.

-ಶ್ರೀನಿವಾಸಗೌಡ, ಅಮಾನತ್ತಿಗೆ ಒಳಗಾಗಿರುವ ಶಿಕ್ಷಕ.

ಕೋಟ್

ಇತ್ತೀಚೆಗೆ ಸರ್ಕಾರಿ ನೌಕರರಿಗೆ ಹಾಗೂ ಶಿಕ್ಷಕರಿಗೆ ಬೆದರಿಕೆ ಹಾಕುವಂತಹ ಕೆಲಸಗಳು ನಡೆಯುತ್ತಿವೆ. ನಿರ್ಭೀತಿಯಿಂದ ಕೆಲಸ ಮಾಡಲು ಆಗುತ್ತಿಲ್ಲ. ಸರ್ಕಾರಿ ನೌಕರರ ಹಿತ ಮುಖ್ಯವಾಗಿದೆ. ತಾಲ್ಲೂಕಿನಲ್ಲಿ ಸರ್ಕಾರಿ ನೌಕರರು ನಿರ್ಭೀತಿಯಿಂದ ಕೆಲಸ ಮಾಡಿದರೆ ತಾಲ್ಲೂಕಿನ ಆಡಳಿತಕ್ಕೆ ಸ್ಪಂಧಿಸಲು ಸಾಧ್ಯವಾಗುತ್ತದೆ ಎಂದು ಗುರುವಾರ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮನವಿ ಮಾಡಿ, ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂಧನೆ ಮಾಡಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

-ಬೈರೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು.

ಕೋಟ್

ಹಾಡು ಹಗಲೇ ಶಿಕ್ಷಕ ಮತ್ತು ನಿವೃತ್ತ ಶಿಕ್ಷಕರೊಬ್ಬರು ಮದ್ಯಪಾನ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ಹಾಲಿ ಶಿಕ್ಷಕ ಶ್ರೀನಿವಾಸಗೌಡರನ್ನು ಮೇಲಾಧಿಕಾರಿಗಳ ಆದೇಶದ ಮೇರೆಗೆ ಅಮಾನತ್ತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.

-ಕೃಷ್ಣಮೂರ್ತಿ, ಡಿಡಿಪಿಐ, ಕೋಲಾರ.

ಚಿತ್ರ ೨೧ ಕೆ.ಎಲ್.ಆರ್. ೦೧ : ಬೈರೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಭಾವಚಿತ್ರ

ಚಿತ್ರ ೨೧ ಕೆ.ಎಲ್.ಆರ್. ೦೧ಎ : ಶಿಕ್ಷಕರಿಬ್ಬರು ಪಾನಗೋಷ್ಠಿಯಲ್ಲಿ ಭಾಗವಹಿಸಿರುವ ಚಿತ್ರ ವೈರಲ್ ಆಗಿರುವುದು.

ಚಿತ್ರ ೨೧ ಕೆ.ಎಲ್.ಆರ್. ೦೧ಬಿ : ಕೃಷ್ಣಮೂರ್ತಿ, ಡಿಡಿಪಿಐ, ಕೋಲಾರ.