ನ್ಯೂಸ್

ಹಾಡಹಗಲೇ ಹುಲಿರಾಯ ಪ್ರತ್ಯಕ್ಷ

ವಿರಾಜಪೇಟೆ : ಬಿಟ್ಟಂಗಾಲ ಕಂಡಂಗಾಲ ಗ್ರಾಮದ ಕಾಫಿ ತೋಟವೊಂದರಲ್ಲಿ ಗುರುವಾರ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.

ಇಲ್ಲಿನ ಗ್ರಾಮದ ಮಂದಮಾಡ ಮುನ್ನಾ ಅವರ ತೋಟದಲ್ಲಿ ಹಾಡಹಗಲೇ ಹುಲಿಯೊಂದು ಕಾಣಿಸಿಕೊಂಡಿದೆ.

ಸ್ಥಳೀಯ ನಾಲ್ಕು ಕಾರ್ಮಿಕರು ತೋಟಕ್ಕೆ ತೆರಳಿ ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ 12.30ರ ವೇಳೆಗೆ ಹುಲಿ ಕಾಣಿಸಿಕೊಂಡಿದೆ. ಕಾರ್ಮಿಕರು ಚೀರಾಡುತ್ತ ಜೀವ ಭಯದಿಂದ ಹುಲಿ ದಾಳಿಯಿಂದ ಪಾರಾಗಲು ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆಯಲ್ಲಿ ಕಾರ್ಮಿಕರು ಎಡವಿ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ತೋಟದಲ್ಲಿ ಕೆಲಸವನನ್ನು ಅರ್ಧದಲ್ಲೇ ನಿಲ್ಲಿಸಿ ತೋಟದ ಮಾಲೀಕರ ಮನೆಗೆ ಆಗಮಿಸಿದ್ದಾರೆ. ಮಾಲೀಕರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸತತ ಎರಡು ತಿಂಗಳುಗಳಿಂದ ಈ ಭಾಗದಲ್ಲಿ ಕಾಡಾನೆಗಳ ಉಪಟಳವಿದ್ದು ಇದೀಗ ಹುಲಿಯ ಭಯ ಕಾಡುತ್ತಿದೆ. ಅರಣ್ಯ ಇಲಾಖೆ ಕಾರ್ಯಾಚರಣೆ ಹೆಸರಿನಲ್ಲಿ ಕಾಡಾನೆಗಳನ್ನು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಅಟ್ಟುತ್ತಿದ್ದಾರೆ. ಇದರಿಂದ ತೋಟದಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುತಿದ್ದಾರೆ. ಅಲ್ಪಸ್ವಲ್ಪ ಕೆಲಸ ಮಾಡಲು ಮುಂದಾದಾಗ ಹುಲಿಯ ದರ್ಶನವಾಗಿದೆ. ಗ್ರಾಮದಲ್ಲಿ ಹುಲಿಯ ಸಂಚಾರ ಇದ್ದು, ಜನ ಭಯದ ನೆರಳಿನಲ್ಲಿ ಬದುಕುವ ಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರಾದ ಮೊಹಮ್ಮದ್ ಅಳಲು ತೋಡಿಕೊಂಡರು. ಅರಣ್ಯ ಇಲಾಖೆ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.