ನವದೆಹಲಿ: ವಿಶ್ವದ ಹಲವೆಡೆ 20 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಭಾರತದಲ್ಲೂ ಆರ್ಭಟಿಸುತ್ತಿರುವ ಕರೊನಾ ಮಾರಿಯಿಂದಾಗಿ ಜನಸಾಮಾನ್ಯರ ಬದುಕಿಗೆ ಎದುರಾಗಿರುವ ಸಂಕಷ್ಟಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದೆ. ಕರೊನಾ ನಿಯಂತ್ರಣದ ನಿಟ್ಟಿನಲ್ಲಿ ದೇಶಾದ್ಯಂತ 3 ವಾರಗಳ ಲಾಕ್ಡೌನ್ ಘೋಷಿಸಿದ ಬಳಿಕ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಈ ಹೆಜ್ಜೆಯಿಟ್ಟಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರ್ಥಿಕ ಪ್ಯಾಕೇಜ್ ನಿರ್ಧಾರ ಘೋಷಿಸಿದರು. ಲಾಕ್ಡೌನ್ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕರು, ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದ್ದು, ಎಲ್ಲ ವರ್ಗಗಳ ನೆರವಿಗಾಗಿ ಈ ಪ್ಯಾಕೇಜ್ ಘೋಷಿಸಲಾಗಿದೆ ಎಂದರು.
ಸಣ್ಣ ಉದ್ದಿಮೆಗಳು, ಬಡವರು, ಕಾರ್ವಿುಕರು, ಅಂಗವಿಕಲರು, ವೈದ್ಯಕೀಯ ಸಿಬ್ಬಂದಿ, ರೈತರು ಹಾಗೂ ಮಹಿಳೆಯರು ಸೇರಿದಂತೆ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಗೆ ಒಳಗಾಗುತ್ತಿರುವ ಪ್ರತಿಯೊಂದು ವರ್ಗಗಳನ್ನೂ ಈ ಪ್ಯಾಕೇಜ್ನಲ್ಲಿ ಕೇಂದ್ರೀಕರಿಸಲಾಗಿದೆ. ಯಾರೊಬ್ಬರೂ ಊಟವಿಲ್ಲದೆ ಹಸಿದು ಮಲಗಬಾರದೆಂಬ ಕಾಳಜಿ ತೋರಿ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಘೋಷಿಸಿದೆ ಎಂದರು.
ವೈದ್ಯ ಸಿಬ್ಬಂದಿಗೆ -ಠಿ;50 ಲಕ್ಷ ವಿಮೆ
ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಎಲ್ಲ ವೈದ್ಯಕೀಯ ಸಿಬ್ಬಂದಿಗೂ ವಿಮಾ ಯೋಜನೆ ಕಲ್ಪಿಸಲಾಗಿದೆ. ವೈದ್ಯರ ಜತೆಗೆ ಆಶಾ ಕಾರ್ಯಕರ್ತೆಯರು, ದಾದಿಯರೆಲ್ಲರಿಗೂ ಮುಂದಿನ ಮೂರು ತಿಂಗಳವರೆಗೆ ತಲಾ 50 ಲಕ್ಷ ರೂ. ಮೌಲ್ಯದ ಮೆಡಿಕಲ್ ವಿಮೆಯನ್ನು ಸರ್ಕಾರ ಒದಗಿಸಲಿದೆ.
ಬಡ ವಿಧವೆಯರು, ಅಂಗವಿಕಲರಿಗೆ -ಠಿ;1 ಸಾವಿರ
ಬಡ ವೃದ್ಧರು, ವಿಧವೆಯರು ಮತ್ತು ಅಂಗವಿಕಲರ ಬ್ಯಾಂಕ್ ಖಾತೆಗಳಿಗೆ ಹೆಚ್ಚುವರಿಯಾಗಿ ಮುಂದಿನ ಮೂರು ತಿಂಗಳವರೆಗೆ ಎರಡು ಕಂತುಗಳಲ್ಲಿ 1 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಇದರಿಂದ 3 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದರ ಜತೆಗೆ ಈಗಾಗಲೇ ಪಡೆಯುತ್ತಿರುವ ಧನಸಹಾಯವೂ ಇರಲಿದೆ.
*ನರೇಗಾ ಯೋಜನೆ ವೇತನ ಹೆಚ್ಚಳ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ಅಡಿ ಕೆಲಸ ಮಾಡುವ ಕೂಲಿ ಕಾರ್ವಿುಕರ ದಿನದ ವೇತನವನ್ನು 182 ರೂ.ನಿಂದ 202 ರೂ.ಗೆ ಹೆಚ್ಚಿಸಲಾಗಿದೆ. ಜತೆಗೆ ಹೆಚ್ಚುವರಿಯಾಗಿ ತಕ್ಷಣದ ಸಹಾಯದ ರೂಪದಲ್ಲಿ 2 ಸಾವಿರ ರೂ. ನೀಡಲಾಗುತ್ತದೆ. ಸುಮಾರು 5 ಕೋಟಿ ಕಾರ್ವಿುಕರು ಇದರ ಸೌಲಭ್ಯ ಪಡೆಯಲಿದ್ದಾರೆ.
*ಜನ-ಧನ ಖಾತೆಯ ಮಹಿಳೆಯರಿಗೆ ಧನಸಹಾಯ
ಪ್ರಧಾನಮಂತ್ರಿ ಜನ-ಧನ ಬ್ಯಾಂಕ್ ಖಾತೆ ಹೊಂದಿರುವ ಸುಮಾರು 20 ಕೋಟಿ ಮಹಿಳೆಯರಿಗೆ ಮುಂದಿನ ಮೂರು ತಿಂಗಳವರೆಗೆ ಪ್ರತಿ ತಿಂಗಳು 500 ರೂ. ಧನಸಹಾಯ ನೀಡಲಾಗುತ್ತದೆ. ಮೂರು ಕಂತುಗಳಲ್ಲಿ ಅವರಿಗೆ ಒಟ್ಟು 1,500 ರೂ. ನೀಡಲಾಗುತ್ತಿದ್ದು, ಇದು ಅವರ ಆರ್ಥಿಕ ಪರಿಸ್ಥಿತಿ ನಿರ್ವಹಣೆಗೆ ಸಹಕಾರಿಯಾಗಲಿದೆ.
* ಗ್ಯಾರಂಟಿ ಇಲ್ಲದೆ -ಠಿ;20 ಲಕ್ಷ ಸಾಲ
ಮಹಿಳೆಯರು ಸ್ವಾವಲಂಬಿಯಾಗಿ ಉದ್ದಿಮೆಗಳನ್ನು ಪ್ರಾರಂಭಿಸುವ ಸಲುವಾಗಿ ಆರ್ಥಿಕ ನೆರವು ಒದಗಿಸಲು ದೇಶದಲ್ಲಿ ಸುಮಾರು 63 ಲಕ್ಷ ಸ್ವ-ಸಹಾಯ ಸಂಘಗಳಿದ್ದು, 7 ಕೋಟಿ ಕುಟುಂಬಗಳು ಇವುಗಳೊಂದಿಗೆ ಸೇರ್ಪಡೆಯಾಗಿವೆ. ಸ್ವ-ಸಹಾಯ ಗುಂಪುಗಳಿಂದ ಮಹಿಳೆಯರಿಗೆ 10 ಲಕ್ಷ ರೂಪಾಯಿವರೆಗೆ ದಾಖಲೆ, ಗ್ಯಾರಂಟಿ ಇಲ್ಲದೇ ಸಾಲ ಪಡೆಯುವ ಸೌಲಭ್ಯವಿದ್ದು, ಈ ಮಿತಿಯನ್ನು 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
* ಕಟ್ಟಡ ಕಾರ್ವಿುಕರಿಗೆ ಸಹಾಯ
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಯಗಳಿಗೆ ಸಂಬಂಧಿಸಿದ ಕಾರ್ವಿುಕರಿಗಾಗಿ ಕೇಂದ್ರ ಸರ್ಕಾರದಲ್ಲಿ ಈಗಾಗಲೇ ಸಹಾಯನಿಧಿ ಇದ್ದು, ಸುಮಾರು 31 ಸಾವಿರ ಕೋಟಿ ರೂಪಾಯಿ ಹೊಂದಿದೆ. ಈ ನಿಧಿಯಲ್ಲಿ ನೋಂದಣಿ ಮಾಡಿಸಿಕೊಂಡಿರುವ ಸುಮಾರು ಮೂರೂವರೆ ಕೋಟಿ ಕಾರ್ವಿುಕರಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಇದರಲ್ಲಿರುವ ಹಣ ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ. ಜತೆಗೆ ಜಿಲ್ಲಾ ಮಿನೆರಲ್ ನಿಧಿಯನ್ನು ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಔಷಧ ಸೌಲಭ್ಯಗಳಿಗಾಗಿ ಬಳಸಿಕೊಳ್ಳುವಂತೆ ಆದೇಶಿಸಲಾಗಿದೆ.
ದೇಶದ ವಿವಿಧ ವರ್ಗಗಳಿಗಾಗಿ ಆರ್ಥಿಕ ಪ್ಯಾಕೇಜ್ ನೀಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಮತ್ತು ಸರಿಯಾದ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿದೆ. ಇದರ ಜತೆಗೆ ರೈತರು, ದಿನಗೂಲಿ ನೌಕರರು, ಕಾರ್ವಿುಕರು ಹಾಗೂ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ವೃದ್ಧರಿಗೆ ಸರ್ಕಾರ ಸಾಲ ಸವಲತ್ತು ನೀಡಬೇಕು. | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ ಕರೊನಾ ಪ್ಯಾಕೇಜ್ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ, ನಿರ್ಮಲಾ ಅವರ ನಿರ್ಧಾರ ಸ್ವಾಗತಾರ್ಹ. 1.70 ಲಕ್ಷ ಕೋಟಿ ರೂ. ಪ್ಯಾಕೇಜ್ ಬಡವರು, ರೈತರು, ಮಹಿಳೆಯರು, ಕೂಲಿ ಕಾರ್ವಿುಕರು ನೆಮ್ಮದಿಯಿಂದ ಬದುಕಲು ನೆರವಾಗಲಿದೆ. ಬಿ.ಎಸ್.ಯಡಿಯೂರಪ್ಪ ಸಿಎಂ
ಗರೀಬ್ ಕಲ್ಯಾಣ್ ಅನ್ನ ಯೋಜನೆ
ಸುಮಾರು 80 ಕೋಟಿ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ. ಪ್ರಸ್ತುತ ಬಡವರಿಗೆ ಪ್ರತಿ ತಿಂಗಳು 5 ಕೆ.ಜಿ ಗೋಧಿ ಅಥವಾ ಅಕ್ಕಿ ಉಚಿತವಾಗಿ ಸಿಗುತ್ತಿದೆ. ಈ ಯೋಜನೆಯಡಿ ಮುಂದಿನ ಮೂರು ತಿಂಗಳವರೆಗೆ ಪ್ರತಿ ವ್ಯಕ್ತಿಗೆ ಹೆಚ್ಚುವರಿ 5 ಕೆ.ಜಿ ಗೋಧಿ ಅಥವಾ ಅಕ್ಕಿ ನೀಡಲಾಗುತ್ತದೆ. ಜತೆಗೆ ಪ್ರತಿ ಕುಟುಂಬಕ್ಕೆ 1 ಕೆ.ಜಿ ಬೇಳೆ ಸಿಗಲಿದೆ.
ಏಪ್ರಿಲ್ನಲ್ಲಿ ರೈತರ ಖಾತೆಗೆ ಹಣ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ವಾರ್ಷಿಕ 6 ಸಾವಿರ ರೂಪಾಯಿ ಧನಸಹಾಯ ಪಡೆಯುತ್ತಿರುವ ರೈತರಿಗೆ ಪ್ರಸಕ್ತ ವರ್ಷದ ಮೊದಲ ಕಂತಿನ 2 ಸಾವಿರ ರೂ.ವನ್ನು ಏಪ್ರಿಲ್ ಮೊದಲ ವಾರದಲ್ಲೇ ಅವರ ಖಾತೆಗೆ ಜಮೆ ಮಾಡಲಾಗುತ್ತದೆ. 8.9 ಕೋಟಿ ರೈತರು ಇದರ ಲಾಭ ಪಡೆಯಲಿದ್ದಾರೆ.
3 ತಿಂಗಳು ಉಚಿತ ಸಿಲಿಂಡರ್
ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಮಹಿಳೆಯರಿಗೆ ಮುಂದಿನ 3 ತಿಂಗಳು ಉಚಿತವಾಗಿ ಎಲ್ಪಿಜಿ ಅಡುಗೆ ಸಿಲಿಂಡರ್ ನೀಡಲಾಗುತ್ತದೆ. ಸುಮಾರು 8.3 ಕೋಟಿ ಬಿಪಿಎಲ್ ಕುಟುಂಬಗಳು ಇದರ ಅನುಕೂಲ ಪಡೆಯಲಿವೆ.
ಇಪಿಎಫ್ ಕೊಡುಗೆ
ಸಂಘಟಿತ ವಲಯದ ಉದ್ಯೋಗ ದಾತರು ಹಾಗೂ ಉದ್ಯೋಗಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳವರೆಗೆ ನೌಕರರ ಭವಿಷ್ಯ ನಿಧಿ (ಇಪಿಎಫ್)ಯನ್ನು ಸರ್ಕಾರವೇ ಭರಿಸಲಿದೆ. ಉದ್ಯೋಗದಾತರು ಹಾಗೂ ನೌಕರರು ಕಟ್ಟುವ ತಲಾ ಶೇ.12 ಇಪಿಎಫ್ನ್ನು ಅಂದರೆ ಒಟ್ಟು ಶೇ.24 ವಂತಿಗೆ ಅನ್ನು ಕೇಂದ್ರ ಸರ್ಕಾರ ನೀಡಲಿದೆ. ಆದರೆ ಈ ಸೌಲಭ್ಯ 100 ಉದ್ಯೋಗಿಗಳವರೆಗೆ ಇರುವ ಹಾಗೂ ಶೇ.90 ಉದ್ಯೋಗಿಗಳು ತಿಂಗಳಿಗೆ ಸರಾಸರಿ 15 ಸಾವಿರ ರೂ.ನಷ್ಟು ವೇತನ ಪಡೆಯುವ ಉದ್ದಿಮೆಗಳಿಗೆ ಅನ್ವಯವಾಗಲಿದೆ. ಇದರಿಂದ 80 ಲಕ್ಷ ಉದ್ಯೋಗಿಗಳು ಮತ್ತು 4 ಲಕ್ಷ ಕಂಪನಿಗಳಿಗೆ ಲಾಭವಾಗಲಿದೆ. ಜತೆಗೆ ಪಿಎಫ್ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಲಾಗುವುದು. ಇದರಿಂದಾಗಿ ಉದ್ಯೋಗಿಗಳು ಕಷ್ಟದ ಸಮಯದಲ್ಲಿ ನೌಕರರ ಭವಿಷ್ಯ ನಿಧಿಯಿಂದ ಶೇ.75ವರೆಗಿನ ಹಣ ಅಥವಾ ಮೂರು ತಿಂಗಳ ವೇತನದಲ್ಲಿ ಯಾವುದು ಕಡಿಮೆ ಇರುತ್ತದೆಯೋ ಅಷ್ಟನ್ನು ಹಿಂಪಡೆಯಬಹುದು. ಸುಮಾರು 4.8 ಕೋಟಿ ಉದ್ಯೋಗಿಗಳಿಗೆ ಇದರಿಂದ ಪ್ರಯೋಜನವಾಗಲಿದೆ.