ಕಳಸ: ಹಸಲರ ಸಮುದಾಯದ ಅಭಿವೃದ್ಧಿಗೆ ನನ್ನ ಅಧಿಕಾರಾವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ತಾಲೂಕು ಹಸಲರ ಸಂಘದ ಪ್ರಥಮ ವರ್ಷದ ಸಮಾವೇಶದ ಉದ್ಘಾಟಿಸಿ ಮಾತನಾಡಿದ ಅವರು, ಅಸಲರು ಕೂಡ ಅಂಬೇಡ್ಕರ್ ಅನುಯಾಯಿಗಳು. ಅವರು ಕಡಿಮೆ ಸಂಖ್ಯೆಯಲ್ಲಿ ಇರಬಹುದು. ಆದರೆ ಅವರಿಗೂ ಸಮಾನ ಪ್ರೋತ್ಸಾಹ ಸಿಗಬೇಕು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜನರಿದ್ದಾರೆ. ನಿವೇಶನ ರಹಿತ, ವಸತಿ ರಹಿತ, ನಿರುದ್ಯೋಗ ಮತ್ತು ಮೀಸಲಾತಿ ಸಮಸ್ಯೆಗಳನ್ನು ಬಗೆಹರಿಸಲು ಕಳಸಕ್ಕೆ ಹೆಚ್ಚು ಬಾರಿ ಬಂದಿದ್ದೇನೆ ಎಂದರು.
ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯವಿರುವ ಪ್ರದೇಶಗಳಿಗೆ ಹೆಚ್ಚು ಅನುದಾನ ನೀಡಿದ್ದೇನೆ. ಅಲ್ಲದೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣವಂತರಾಗಬೇಕು. ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ಬರಬೇಕು. ಹಸಲರ ಪಂಗಡದ ಯಾರಾದರೂ ಐಎಎಸ್ ಮಾಡಿದಲ್ಲಿ ಅದರಲ್ಲಿ ಓರ್ವ ವಿದ್ಯಾರ್ಥಿಯ ಒಂದು ವರ್ಷದ ಸಂಪೂರ್ಣ ಖರ್ಚನ್ನು ನಾನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಮೂಲಸೌಲಭ್ಯಗಳನ್ನು ನೀಡುತ್ತದೆ. ಆದರೆ ನಿಮ್ಮ ಬದುಕನ್ನು ನೀವೇ ಸರಿ ಮಾಡಿಕೊಳ್ಳಬೇಕು. ಮಕ್ಕಳ ಶೈಕ್ಷಣಿಕ ಮಟ್ಟದಿಂದ ಮಾತ್ರ ಇದು ಸಾಧ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಮಕ್ಕಳು ವಿವಿಧ ವೇಷಭೂಷಣ ತೊಟ್ಟು ಕಳಸ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತರನ್ನು ಗೌರವಿಸಲಾಯಿತು.
ತಾಲೂಕು ಹಸಲರ ಸಂಘದ ಅಧ್ಯಕ್ಷ ಲಿಂಗಪ್ಪ ನಂತೂರು, ಗೌರವಾಧ್ಯಕ್ಷ ಸುಂದರ ಕವನಳ್ಳ, ಸಮಗ್ರ ಅಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಭಾಗೀರಥಿ, ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ, ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಕೂಲೂರು, ಹರೀಶ್ ಆಳ್ವ, ಶ್ರೀಕಾಂತ್, ಜಿ.ಕೃಷ್ಣ, ಹರೀಶ್ ಸಬ್ಬೇನಹಳ್ಳಿ, ಸುನಂದಾ ಶ್ರೀಧರ್, ನಾರಾಯಣ, ಹೂವಪ್ಪ, ವೀರೇಂದ್ರ, ಲಕ್ಷ್ಮಣಾಚಾರ್ ಇದ್ದರು.