ನ್ಯೂಸ್

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಬೆಂಗಳೂರು ವಿಶೇಷ ಕೋರ್ಟ್​ಗೆ ವರ್ಗ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಏಪ್ರಿಲ್​ 16ರಂದು ರಾತ್ರಿ ನಡೆದಿದ್ದ ಕೋಮುಗಲಭೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯನ್ನು ಬೆಂಗಳೂರು ವಿಶೇಷ ಕೋರ್ಟ್​ಗೆ ವರ್ಗಾವಣೆ ಮಾಡಿ ಇಲ್ಲಿನ ನಾಲ್ಕನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ವಿವಾದಾತ್ಮಕ ವಾಟ್ಸ್​ ಆ್ಯಪ್​ ಸ್ಟೇಟಸ್​ಗೆ ಸಂಬಂಧಿಸಿದಂತೆ ಸಾವಿರಾರು ಜನ ದಂಗೆ ಎದ್ದಿದ್ದರು. ಆರೋಪಿಯನ್ನು ತಮಗೆ ಒಪ್ಪಿಸುವಂತೆ ಹಳೇ ಹುಬ್ಬಳ್ಳಿ ಠಾಣೆಗೆ ಮುತ್ತಿಗೆ ಹಾಕಿದ್ದರು. ಪೊಲೀಸರ ಮೇಲೆ ಕಲ್ಲೆಸೆದು ಗಾಯಪಡಿಸಿದ್ದರು. ಈ ಕುರಿತು ಒಟ್ಟು 13 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಒಟ್ಟು 155 ಆರೋಪಿಗಳನ್ನು ಬಂಧಿಸಿದ್ದರು. ಇವರನ್ನು ಬೆಳಗಾವಿ, ಕಲಬುರಗಿ, ಮೈಸೂರು ಸೇರಿದಂತೆ ವಿವಿಧ ಜೈಲುಗಳಲ್ಲಿ ಇರಿಸಿದ್ದರು.
ಈ 13 ಪ್ರಕರಣಗಳ ಪೈಕಿ ಒಂದು ಪ್ರಕರಣವನ್ನು (ಸಿಆರ್​ ನಂಬರ್​ 63/2022) ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಕಾಯ್ದೆಯಡಿ ದಾಖಲಿಸಲಾಗಿತ್ತು. ಈ ಪ್ರಕರಣದಡಿ ದಾಖಲಾಗುವ ಎಲ್ಲ ಪ್ರಕರಣಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವೇ ವಿಚಾರಣೆ ನಡೆಸುತ್ತದೆ. ಹಾಗಾಗಿ, ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಇಲ್ಲಿನ ನಾಲ್ಕನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಈ ಆದೇಶಿಸಿದೆ.