ಭೇರ್ಯ: ಜನರ ಬಲಿಗಾಗಿ ಕಾಯುತ್ತಿರುವ ವಿದ್ಯುತ್ ತಂತಿ ಮತ್ತು ಕಂಬಗಳು… ವಿದ್ಯುತ್ ಸಂಪರ್ಕ ಪಡೆಯಲು ಜನರ ಪರದಾಟ…ಗ್ರಾಮ ಪಂಚಾಯಿತಿ ಮತ್ತು ಸೆಸ್ಕ್‌ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಆಗಿಲ್ಲ ಪ್ರಯೋಜನ.
ಇದು ತಾಲೂಕಿನ ಗಂಧನಹಳ್ಳಿ ಗ್ರಾಮದ ಪರಿಸ್ಥಿತಿ. ಕಂಬಗಳನ್ನು ಬದಲಿಸುವಂತೆ ಸ್ಥಳೀಯರು ಸೆಸ್ಕ್ ಮತ್ತು ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದ್ದು, ಜನರು ಜೀವಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಗಂಧನಹಳ್ಳಿ ದೊಡ್ಡ ಗ್ರಾಮ. 40 ವರ್ಷದ ಹಿಂದೆ ಅಳವಡಿಸಲಾದ ವಿದ್ಯುತ್ ಕಂಬಗಳು ಈಗಲೂ ಇವೆ. ಅಲ್ಲದೆ ಕಬ್ಬಿಣದ ವಿದ್ಯುತ್ ಕಂಬಗಳು ಹೇಗಿದ್ದವು ಎಂಬುವುದನ್ನು ಇಲ್ಲಿ ಕಾಣಸಿಗುತ್ತವೆ. ಅಲ್ಲದೆ ವಿದ್ಯುತ್ ತಂತಿಗಳು ಮತ್ತು ಟ್ರಾನ್ಸ್‌ಫಾರ್ಮರ್ ಇಲ್ಲಿ ಕೈಗೆಟುಕುತ್ತದೆ. ಅಪ್ಪಿತಪ್ಪಿ ಇದನ್ನು ಮುಟ್ಟಿದರೆ ಪ್ರಾಣ ಹೋಗಬಹುದು. ಗ್ರಾಮದ ಬಹುತೇಕ ಬೀದಿಗಳಲ್ಲಿರುವ ವಿದ್ಯುತ್ ಕಂಬ ಮತ್ತು ತಂತಿಗಳು ಗಿಡಗಂಟಿಯಿಂದ ಮುಚ್ಚಿಹೋಗಿವೆ. ಮಳೆಗಾಲದಲ್ಲಿ ತಂತಿಗಳು ಮರದ ಕೊಂಬೆಗಳಿಗೆ ಸ್ಪರ್ಶಿಸಿ ಬೆಂಕಿ ಕಾಣಿಸಿಕೊಂಡಿರುವ ಉದಾಹರಣೆ ಸಾಕಷ್ಟಿದೆ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಳವಡಿಸಲಾಗಿರುವ ಕಬ್ಬಿಣದ ಕಂಬಗಳು ಸಾರ್ವಜನಿಕರ ಬಲಿಗಾಗಿ ಕೈಬೀಸಿ ಕರೆಯುವಂತಿವೆ. ಜತೆಗೆ ತಂತಿಗಳು ಜೋತು ಬಿದ್ದಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಗ್ರಾಮದ ಒಂದೇ ಒಂದು ಬೀದಿಯಲ್ಲಿ ಸರಿಯಾದ ವಿದ್ಯುತ್ ಕಂಬ ಮತ್ತು ತಂತಿ ಅಳವಡಿಸುವ ಕೆಲವಾಗಿಲ್ಲ. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಹೇಳತೀರದು. ಈ ನಡುವೆ ಪಕ್ಷಿ ಹಾಗೂ ಪ್ರಾಣಿಗಳು ಕಂಬಗಳ ಗ್ರೌಂಡಿಂಗ್‌ಗೆ ಸಿಕ್ಕಿ ಮೃತಪಟ್ಟಿವೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಇರುವ ಸ್ಥಳದಲ್ಲಿ ಸಮಸ್ಯೆ ಹೆಚ್ಚಿದೆ. ಇದರ ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿದೆ. ಪುಟ್ಟ ಮಕ್ಕಳು ಹೊರಗೆ ಓಡಾಡುವಾಗ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಇಲ್ಲ. ಅಲ್ಲದೆ ಅಂಗನವಾಡಿ ಕಟ್ಟಡದ ಹಿಂದೆ ಮತ್ತು ಮುಂದೆ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಆತಂಕವನ್ನು ಹೆಚ್ಚಿಸಿದೆ.
ನಿರ್ವಹಣೆ ಜವಾಬ್ದಾರಿ ಯಾರದ್ದು?: ಗ್ರಾಮದಲ್ಲಿನ ಬೀದಿ ದೀಪಗಳ ನಿರ್ವಹಣೆ ಯಾರು ಮಾಡಬೇಕೆಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಈ ಸಂಬಂಧ ಸೆಸ್ಕ್ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಕೇಳಿದರೆ ಗ್ರಾಮ ಪಂಚಾಯಿತಿಯವರು ಸಿಟ್ಟಿಂಗ್ ಚಾರ್ಜ್ ಕಟ್ಟಿಕೊಟ್ಟರೆ ಕಂಬಗಳನ್ನು ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಗ್ರಾಮ ಪಂಚಾಯಿತಿಯವರನ್ನು ಈ ಸಂಬಂಧ ಪ್ರಶ್ನಿಸಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದುದಿಲ್ಲ ಎನ್ನುತ್ತಾರೆ. ಹೀಗಿರುವಾಗ ಜನರು ಸಮಸ್ಯೆಯನ್ನು ಯಾರ ಬಳಿ ಹೇಳಬೇಕು ಎಂದು ಪರದಾಡುವಂತಾಗಿದೆ. ಗ್ರಾಮದ ಬಹುತೇಕ ಬೀದಿಗಳಲ್ಲಿನ ಜನರು ತಂತಿಗಳಿಗೆ ದಾರದ ಕಲ್ಲು ಕಟ್ಟಿ ಸಂಪರ್ಕ ಪಡೆದುಕೊಂಡಿರುವ ಉದಾಹರಣೆ ಉಂಟು. ತಂತಿಗಳಿಗೆ ಏಕೆ ಕಲ್ಲು ಕಟ್ಟಿದ್ದೀರ ಎಂದು ಈವರೆಗೆ ಒಬ್ಬ ಅಧಿಕಾರಿಯೂ ಕೇಳಿಲ್ಲ.
ವಿದ್ಯುತ್ ಬಿಲ್ ನೀಡಲು ಹೋದಾಗ ಜನರು ಜಗಳಕ್ಕೆ ಬರುತ್ತಾರೆ. ದುರಸ್ತಿಯಲ್ಲಿರುವ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಸರಿಪಡಿಸುವಂತೆ ಅಧಿಕಾರಿಗಳು ಮತ್ತು ಲೈನ್‌ಮನ್‌ಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಮುಂದಾಗುವ ಅನಾಹುತಕ್ಕೆ ಅವರೇ ಕಾರಣರಾಗುತ್ತಾರೆ.
ಲೋಕೇಶ್ ಗ್ರಾಮಸ್ಥ
ಸುಮಾರು 10 ವರ್ಷಗಳಿಂದ ಗ್ರಾಮದಲ್ಲಿ ಈ ಸಮಸ್ಯೆ ಇದೆ. ವಿದ್ಯುತ್ ಕಂಬ ಮತ್ತು ತಂತಿಗಳ ಸುತ್ತ ಗಿಡಗಂಟಿ ಬೆಳೆದಿದೆ. ಇದನ್ನು ಸ್ವಚ್ಛಗೊಳಿಸಿ ಗುಣಮಟ್ಟದ ವಿದ್ಯುತ್ ಕಂಬಗಳನ್ನು ಹಾಕುವತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಲಿ. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದರೆ ಶಾಸಕರ ಗಮನಕ್ಕೆ ತಂದು ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು.
ಹೇಮಂತ್ ನಿರ್ದೇಶಕ, ಜಿಲ್ಲಾ ಕುರುಬರ ಸಂಘ
ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂಭಾಗವಿರುವ ಕಂಬ ಬದಲಾವಣೆಗೆ ಮಾತ್ರ ಶಿಫ್ಟಿಂಗ್ ಚಾರ್ಜ್ ಅನ್ನು ಗ್ರಾಪಂ ನೀಡುತ್ತದೆ. ಉಳಿದ ಕಂಬಗಳಿಗೆ ನಾವು ಜವಾಬ್ದಾರರಲ್ಲ. ಅದು ಸೆಸ್ಕ್ ಜವಾಬ್ದಾರಿ. ಟೆಂಡರ್ ಕರೆದು ಗುತ್ತಿಗೆದಾರರಿಂದ ಕೆಲಸ ಮಾಡಿಸಬೇಕಾಗಿರುವುದು ಸೆಸ್ಕ್. ಎರಡು ವರ್ಷದಿಂದ ಅವರಿಗೆ ಹೇಳಲಗುತ್ತಿದ್ದು, ಸರ್ಕಾರದ ಅನುದಾನ ಬಂದಿಲ್ಲ ಎನ್ನುತ್ತಾರೆ.
ಸರಳಾ ಪಿಡಿಒ, ಗಂಧನಹಳ್ಳಿ ಗ್ರಾಮ ಪಂಚಾಯಿತಿ
ಈ ಹಿಂದೆ ಬಂದ ಅರ್ಜಿಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಈಗ ಬಂದಿದ್ದೇನೆ. ತುರ್ತಾಗಿ ಸಮಸ್ಯೆ ಇರುವ ಕಂಬಗಳ ಪಟ್ಟಿಯನ್ನು ಕೊಡಲು ಗ್ರಾಮ ಪಂಚಾಯಿತಿಗೆ ತಿಳಿಸಿದ್ದೇನೆ. ದುರಸ್ತಿಯಲ್ಲಿರುವ ಕಂಬಗಳನ್ನು ಶೀಘ್ರ ಬದಲಾವಣೆ ಮಾಡುತ್ತೇನೆ. ಸಿಬ್ಬಂದಿ ಸ್ಪಂದಿಸದಿದ್ದರೆ ದೂರು ನೀಡಿ ಕ್ರಮ ಕೈಗೊಳ್ಳುತ್ತೇನೆ.
ಸಂದೇಶ್ ಜೆಇ, ಸೆಸ್ಕ್ ಮಿರ್ಲೆ ವಿಭಾಗ