ಕೋಲಾರ: ತಾಲೂಕಿನ ಹೊನ್ನೇನಹಳ್ಳಿಯ ಸುನಿಲ್ ಎಂಬಾತ ಯುವತಿಯನ್ನು ಪ್ರೀತಿಸುವಂತೆ ಪೀಡಿಸಿದ್ದು, ಇದಕ್ಕೆ ನಿರಾಕರಿಸಿದಳೆಂದು ಬೆದರಿಕೆ ಹಾಕಿದ್ದ ಆರೋಪದಲ್ಲಿ ಮೂವರನ್ನು ಕೋಲಾರ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಹೊನ್ನೇನಹಳ್ಳಿ ನಿವಾಸಿ ಸುನೀಲ್ ಕುಮಾರ್ (27), ಕೋಲಾರದ ವಿನೋಬ ನಗರ ನಿವಾಸಿ ಯಶ್ವಂತ್ ಯಾದವ್ (26) ಹಾಗೂ ತಾಲೂಕಿನ ಉರುಗಿಲಿ ಮನೋಜ್ ಕುಮಾರ್ (26) ಬಂಧಿತರು.
ಸುನೀಲ್ ಮತ್ತು ಇತರರು ಕಾರಿನಲ್ಲಿ, ಕಬ್ಬಿಣದ ಲಾಂಗ್, ಮಚ್ಚುಗಳನ್ನು ಇಟ್ಟುಕೊಂಡು ಮಾ.8ರಂದು ರಾತ್ರಿ 9 ಗಂಟೆ ಸಮಯದಲ್ಲಿ ಯುವತಿ ತಂದೆ ರಾಮಸ್ವಾಮಯ್ಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ಸಂಬಂಧ ರಾಮಸ್ವಾಮಯ್ಯ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೊಂಡಿದ್ದ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುನೀಲ್ ವಿರುದ್ಧ ಈಗಾಗಲೇ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಹಾಗೂ ಯಶ್ವಂತ್ ಯಾದವ್ ವಿರುದ್ಧ ಚಲನಚಿತ್ರ ನಟ ದಿ.ವಜ್ರಮುನಿ ಅಳಿಯನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಡಿಯಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲಿಸರು ತಿಳಿಸಿದರು. ತನಿಖಾ ತಂಡದ ಕಾರ್ಯವನ್ನು ಎಸ್ಪಿ ಬಿ.ನಿಖಿಲ್ ಶ್ಲಾಘಿಸಿದ್ದಾರೆ.