ನ್ಯೂಸ್

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ

ಪಿರಿಯಾಪಟ್ಟಣ: ಹಲ್ಲುಗಳು ಆರೋಗ್ಯಕರವಾಗಿದ್ದಲ್ಲಿ ಬಾಯಿಗೆ ಸಂಬಂಧಿಸಿದ ರೋಗಗಳಿಂದ ಪಾರಾಗಬಹುದು ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯೆ ಡಾ.ದಿವ್ಯಶ್ರೀ ಹೇಳಿದರು.
ತಾಲೂಕಿನ ನಂದಿನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹುಣಸವಾಡಿ ಗ್ರಾಮದಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರತಿನಿತ್ಯ ಹಲ್ಲುಗಳ ಶುಚಿತ್ವವನ್ನು ಕಾಪಾಡುವುದು, ಸಿಹಿ ಪದಾರ್ಥಗಳ ಸೇವನೆಯ ನಂತರ ಯಾವುದೇ ರೀತಿಯ ಆಹಾರದ ಪದಾರ್ಥಗಳು ಹಲ್ಲುಗಳ ನಡುವೆ ಉಳಿಯದಂತೆ ಎಚ್ಚರವಹಿಸುದು ಬಹು ಮುಖ್ಯ. ಇದರಿಂದ ದಂತಗಳಲ್ಲಿ ಕುಳಿ ಬೀಳುವುದನ್ನು ತಡೆಯಬಹುದಾಗಿದೆ ಎಂದರು. ಮುಂಜಾನೆ ಮತ್ತು ರಾತ್ರಿ ಹಲ್ಲುಗಳನ್ನು ಸ್ವಚ್ಛಗೊಳಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಹಲ್ಲು ನೋವು ಮತ್ತು ಹುಳುಕು ಕಂಡು ಬಂದರೆ ಕೂಡಲೇ ದಂತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಹೆಚ್ಚಿನ ಕಾಳಜಿ ವಹಿಸಿ:ತಾಲೂಕು ಆರೋಗ್ಯಾಧಿಕಾರಿ ಡಾ.ಉಮೇಶ್ ಕುಮಾರ್ ಮಾತನಾಡಿ, ಹಲ್ಲಿನ ಸಂರಕ್ಷಣೆ ಬಗ್ಗೆ ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು.