ನ್ಯೂಸ್

ಹರಟಿ ಗ್ರಾಮದ ಬಳಿ ರೈತರ ಮತ್ತು ಅರಣ್ಯ ಇಲಾಖೆಯವರ ಮಧ್ಯೆ ಸಂಘರ್ಷ / ರೈತರಿಂದ ವಶಪಡಿಸಿಕೊಂಡಿದ್ದ ಜಮೀನಿಗೆ ಲಗ್ಗೆ ಇಟ್ಟ ರೈತರು / ಪೋಲಿಸರ ಮಧ್ಯ ಪ್ರವೇಶ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಅರಣ್ಯ ಇಲಾಖೆ ಮತ್ತು ರೈತರ ಮಧ್ಯೆ ಮತ್ತೆ ಸಂಘರ್ಷ ಉಂಟಾಗಿದ್ದು, ಅರಣ್ಯ ಇಲಾಖೆಯಿಂದ ತೆರವು ಕಾರ್ಯಾಚರಣೆ ಮಾಡಿದ ಜಮೀನಿನಗೆ ರೈತರು ಭಾನುವಾರ ಲಗ್ಗೆ ಇಟ್ಟಿದ್ದರಿಂದ ಅರಣ್ಯ ಇಲಾಖೆ ಮತ್ತು ರೈತರ ಮಧ್ಯೆ ಮತ್ತೆ ಜಟಾಪಟಿ ಮುಂದುವರೆದಿದೆ.

ತಾಲ್ಲೂಕಿನ ಹರಟಿ ಗ್ರಾಮದ ಬಳಿ ಅರಣ್ಯ ಇಲಾಖೆಯವರು ೧೯೦ ಎಕರೆ ಜಮೀನು ಒತ್ತುವರಿಯನ್ನು ತೆರವುಗೊಳಿಸಿದ್ದರು. ಅರಣ್ಯ ಇಲಾಖೆಯವರು ತೆರವುಗೊಳಿದ್ದ ಜಮೀನಿನಲ್ಲಿ ಹೊಸದಾಗಿ ಗಿಡಗಳನ್ನು ನಾಟಿ ಮಾಡಲು ಗುಂಡಿಗಳನ್ನು ತೋಡಿದ್ದರು. ಭಾನುವಾರ ಸರ್ವೇ ನಂ.೩೧ ರಲ್ಲಿ ರೈತರು ಗುಂಡಿಗಳನ್ನು ಮುಚ್ಚಿ ಅರಣ್ಯ ಇಲಾಖೆಯವರು ಅಕ್ರಮವಾಗಿ ನಮ್ಮ ಜಮೀನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸರ್ಕಾರ ಅರಣ್ಯ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೇ ನಡೆಸಿ ಅರಣ್ಯ ಇಲಾಖೆಗೆ ಜಮೀನು ಸೇರುವುದಾದರೆ ಮಾತ್ರ ವಶಪಡಿಸಿಕೊಳ್ಳಬೇಕು. ಇಲ್ಲವಾದರೆ ರೈತರಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು ಎಂದು ಸೂಚನೆ ನೀಡಿದ್ದರೂ ಅರಣ್ಯ ಇಲಾಖೆಯವರು ಜಂಟಿ ಸರ್ವೇ ನಡೆಸದೆ ನಮ್ಮ ಜಮೀನುಗಳನ್ನು ವಶಪಡಿಸಿಕೊಂಡಿದ್ದಾರೆ. ನಮ್ಮ ಬಳಿ ಎಲ್ಲಾ ದಾಖಲೆಗಳು ಇದ್ದರೂ ಅರಣ್ಯ ಇಲಾಖೆಯವರು ವಿನಾಕಾರಣ ನಮ್ಮನ್ನು ವಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆಂದು ರೈತ ಶ್ರೀನಿವಾಸ್ ಸೇರಿದಂತೆ ಸುಮಾರು ರೈತರು ಅರಣ್ಯ ಇಲಾಖೆಯವರು ತೆರವು ಕಾರ್ಯಾಚರಣೆ ಮಾಡಿದ್ದ ಜಮೀನಿಗೆ ಮುತ್ತಿಗೆ ಹಾಕಿ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿದ್ದರು.

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರೈತರ ಮಧ್ಯೆ ಜಟಾಪಟಿ ಮುಂದುವರೆಯಿತು. ಕಸಬಾ ಠಾನೆಯ ಪೋಲಿಸರು ಮಧ್ಯೆ ಪ್ರವೇಶ ಮಾಡಿ ಸಂಘರ್ಷವನ್ನು ತಪ್ಪಿಸಿದರು. ರೈತರು ನಮ್ಮ ಪ್ರಾಣ ಹೋದರೂ ಜಾಗವನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಅರಣ್ಯ ಇಲಾಖೆಯವರು ಅಕ್ರಮ ಪ್ರವೇಶ ವಿರುದ್ಧ ಕೇಸು ದಾಖಲಿಸಬೇಕಾಗುತ್ತದೆ ಎಂದು ರೈತರಿಗೆ ಎಚ್ಚರಿಕೆ ನೀಡಿದರು. ಈ ತಿಂಗಳ ೩೦ ರಂದು ಜಂಟಿ ಸರ್ವೇ ನಡೆಸಲು ದಿನಾಂಕ ನಿಗಧಿಯಾಗಿದೆ. ಅಲ್ಲಿಯ ತನಕ ಯಾರೂ ಪ್ರವೇಶ ಮಾಡುವುದು ಬೇಡ ಎಂದು ಪೋಲಿಸರು ರೈತರಿಗೆ ಸೂಚನೆ ನೀಡಿದ ನಂತರ ರೈತರು ತಾತ್ಕಾಲಿಕವಾಗಿ ಸಂಘರ್ಷ ಕೈಬಿಟ್ಟಿದ್ದಾರೆ.

ರೈತ ಶ್ರೀನಿವಾಸ್ ಮಾತನಾಡಿ ಸುಮಾರು ೩೦ ವರ್ಷಗಳಿಂದ ಸದರಿ ಜಮೀನಿನಲ್ಲಿ ನೂರಾರು ರೈತರು ಬೆಳೆ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯಿಂದ ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿದ್ದರೂ ಅರಣ್ಯ ಇಲಾಖೆಯವರು ಏಕಾಏಕಿ ನಮ್ಮ ಜಮೀನುಗಳನ್ನು ತೆರವುಗೊಳಿಸಿದ್ದು, ಇದರಿಂದ ಲಕ್ಷಾಂತರ ರೂ.ಗಳ ರೈತರಿಗೆ ನಷ್ಟವಾಗಿದೆ. ಯಾವುದೇ ಕಾರಣಕ್ಕೂ ಜಮೀನು ವಾಪಸ್ ನೀಡುವುದಿಲ್ಲ. ನಮಗಾಗಿರುವ ನಷ್ಟವನ್ನು ಅರಣ್ಯ ಇಲಾಖೆಯವರು ನೀಡಬೇಕು. ನಾವು ಜಾಗ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಒತ್ತುವರಿ ತೆರವು ಜಾಗದಲ್ಲಿಯೇ ಅಡುಗೆ ತಯಾರಿಸಿ ಗುಂಡಿಗಳ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದರು.

ಬಾಕ್ಸ್

ಕೋಲಾರ ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಇರುವ ಜಮೀನು ಶೇ.೭ ರಷ್ಟು ಮಾತ್ರ. ಶೇ.೨೧ ರಷ್ಟು ಅರಣ್ಯ ಭೂಮಿ ಇದ್ದರೆ ಒಳ್ಳೆಯ ಗಾಳಿ, ಮಳೆ, ನೀರು ಸಾರ್ವಜನಿಕರಿಗೆ ಸಿಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಇರುವ ಶೇ.೭ ರಷ್ಟು ಜಮೀನಿನಲ್ಲಿ ೧೧ ಸಾವಿರ ಎಕರೆ ಜಮೀನನ್ನು ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಈಗಾಗಲೇ ೩ ಎಕೆರೆ ಜಮೀನನ್ನು ಒತ್ತುವರಿ ತೆರವು ಮಾಡಲಾಗಿದೆ. ಇನ್ನು ೮ ಸಾವಿರ ಎಕೆರೆ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ. ಅರಣ್ಯ ಇಲಾಖೆಗೆ ಸಾರ್ವಜನಿಕರು ಹಾಗೂ ಎಲ್ಲಾ ಇಲಾಖೆಗಳವರು ಸಹಕಾರ ನೀಡಬೇಕು. ಅರಣ್ಯ ಇಲಾಖೆಯವರು ಸ್ವಂತಕ್ಕಾಗಿ ಜಮೀನನ್ನು ಉಳಿಸುತ್ತಿಲ್ಲ. ಸಾರ್ವಜನಿಕರ ಹಿತಕ್ಕಾಗಿಯೇ ಉಳಿಸುತ್ತಿದ್ದೇವೆ. ಇದನ್ನು ಎಲ್ಲರೂ ಅರಿಯಬೇಕು. ಸಂಘರ್ಷಕ್ಕೆ ಇಳಿಯಬಾರದು ಎಂದು ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ಸರೀನಾ ಸಿಕ್ಲಿಂಗ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೋಟ್

ಹರಟಿ ಗ್ರಾಮದ ಸುತ್ತಮುತ್ತಲು ೧೯೦ ಎಕರೆ ಜಮೀನನ್ನು ಒತ್ತುವರಿ ತೆರವು ಮಾಡಲಾಗಿದೆ. ಸದರಿ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು, ರೈತ ಶ್ರೀನಿವಾಸ ಎಂಬುವನು ರಿಯಲ್ ಎಸ್ಟೇಟ್ ವ್ಯಾಪಾರಸ್ಥ. ಆತ ಅಲ್ಲಿ ರೈತರಿಂದ ಜಮೀನು ಖರೀದಿ ಮಾಡಿದ್ದಾನೆ. ಉಳಿದ ರೈತರಿಗೆ ಪ್ರಚೋದನೆ ನೀಡಿ ಅರಣ್ಯ ಇಲಾಖೆಯೊಂದಿಗೆ ಸಂಘರ್ಷಕ್ಕೆ ಮುಂದಾಗುತ್ತಿದ್ದಾರೆ. ಕೆಲವು ರೈತರಿಗೆ ಜಮೀನು ಉಳಿಯುವುದಿಲ್ಲ ಎಂದು ಗೊತ್ತು ಆದರೂ ಸಹ ಶ್ರೀನಿವಾಸ್ ರೈತರಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾನೆ. ಭಾನುವಾರ ಸುಮಾರು ೭೦ ರಿಂದ ೮೦ ಜನ ರೈತರು ಅಲ್ಲದೆ ಇರುವವರನ್ನು ಕರೆದುಕೊಂಡು ಅತಿಕ್ರಮಣ ಪ್ರವೇಶಕ್ಕೆ ಮುಂದಾಗಿದ್ದರು. ಪೋಲಿಸರು ಅದನ್ನು ತಡೆದಿದ್ದಾರೆ. ಹೀಗೆ ಮುಂದುವರೆದರೆ ಅವರನ್ನು ವಶಕ್ಕೆ ಪಡೆದು ಕೇಸು ದಾಖಲಿಸಿಕೊಳ್ಳಲಾಗುವುದು. ಆ.೩೦ ರಂದು ಜಂಟಿ ಸರ್ವೇ ನಡೆಸಲಾಗುವುದು. ಅಲ್ಲಿಯ ತನಕ ರೈತರು ಕಾಯಬೇಕಾಗಿದೆ.

-ಸರೀನಾ ಸಿಕ್ಲಿಂಗ್, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ.

ಚಿತ್ರ ೨೪ ಕೆ.ಎಲ್.ಆರ್. ೦೧ : ಹರಟಿ ಗ್ರಾಮದ ಸರ್ವೇ ನಂ.೩೧ ರಲ್ಲಿ ಅರಣ್ಯ ಇಲಾಖೆಯವರು ವಶಪಡಿಸಿಕೋಂಡಿದ್ದ ಜಮೀನಿಗೆ ರೈತರು ಲಗ್ಗೆ ಇಟ್ಟು ಅರಣ್ಯ ಇಲಾಖೆಯವರು ಗಿಡ ನೆಡಲು ತೋಡಿದ್ದ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದ ರೈತರನ್ನು ತೆಡೆದ ಪೋಲಿಸರು.