ತರೀಕೆರೆ: ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಹೇಳಿದರು.
ಪಟ್ಟಣದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಎರಡೂ ಹಬ್ಬಗಳ ಸಂದರ್ಭದಲ್ಲಿ ಹೆಚ್ಚು ಸ್ವಯಂ ಸೇವಕರನ್ನು ಬಳಸಿಕೊಂಡು ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ನೀಡುವ ನಿರ್ದೇಶನಗಳನ್ನು ಪಾಲಿಸಬೇಕಲ್ಲದೆ, ಶಾಂತಿ, ಸುವ್ಯವಸ್ಥೆ ಕಾಪಾಡಬೇಕು ಎಂದು ಸಂಘಟಕರಿಗೆ ಸೂಚಿಸಿದರು.
ಡಿವೈಎಸ್ಪಿ ಡಾ. ವಿ.ಎಸ್.ಹಾಲಮೂರ್ತಿರಾವ್ ಮಾತನಾಡಿ, ಗಣೇಶ ಪ್ರತಿಷ್ಟಾಪನಾ ಸಮಿತಿ ಸಿಸಿ ಟಿವಿ ಅಳವಡಿಸಬೇಕು. ಈದ್ ಮಿಲಾದ್ ಮೆರವಣಿಗೆಯಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದರು.
ಹಿಂದು ಮಹಾಸಭಾ ಗಣಪತಿ ಸಮಿತಿ ಪ್ರಮುಖ ಟಿ.ಎಂ.ಬೋಜರಾಜ್ ಮಾತನಾಡಿ, ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕಲ್ಲದೆ, ಅಹಿತಕರ ಘಟನೆಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಮುಸ್ಲಿಂ ಸಮುದಾಯದ ಪ್ರಮುಖ ಆದಿಲ್ ಪಾಷಾ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಪ್ರಚೋದನಾಕಾರಿ ಪೋಸ್ಟ್‌ಗಳ ಕಡೆ ಗಮನ ನೀಡದೆ ಪೊಲೀಸರ ಮಾರ್ಗದರ್ಶನದಲ್ಲಿ ಹಬ್ಬ ಆಚರಿಸಬೇಕು ಎಂದು ಹೇಳಿದರು. ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಎಸಿ ಎನ್.ವಿ.ನಟೇಶ್, ಬಿಇಒ ಎಚ್.ಎ.ಪರಶುರಾಮಪ್ಪ ಮತ್ತಿತರರಿದ್ದರು.