ಚಾಮರಾಜನಗರ: ಗೌರಿ ಗಣೇಶ ಹಬ್ಬದ ಹಿನ್ನಲೆ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರಿಂದ ಭಾನುವಾರ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು.
ಹನೂರು ಸುತ್ತಮುತ್ತಲ 20ಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರಸ್ಥಾನವಾಗಿದೆ. ಹೀಗಾಗಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಬಂಡಳ್ಳಿ, ಶಾಗ್ಯ, ಅಣಗಳ್ಳಿದೊಡ್ಡಿ, ಚಂಗವಾಡಿ, ಭೈರನಾಥ, ತೋಮಿಯಾರ್‌ಪಾಳ್ಯ, ಅಜ್ಜೀಪುರ, ಎಲ್ಲೇಮಾಳ, ಮಾಲಾಪುರ, ಆರ್.ಎಸ್.ದೊಡ್ಡಿ, ಮಂಗಲ, ಕಣ್ಣೂರು, ಆನಾಪುರ, ಚನ್ನಾಲಿಂಗನಹಳ್ಳಿ, ಬಿ.ಗುಂಡಾಪುರ ಸೇರಿದಂತೆ ಈ ಭಾಗದ ಇನ್ನಿತರ ಗ್ರಾಮದ ಜನರು ಭಾನುವಾರ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ಪಟ್ಟಣದ ದಿನಸಿ ಅಂಗಡಿ, ಬಟ್ಟೆ ಅಂಗಡಿ, ತರಕಾರಿ ಅಂಗಡಿ, ಹಣ್ಣು, ಹೂವಿನ ಅಂಗಡಿ ಹಾಗೂ ಪೂಜಾ ಸಾಮಾಗ್ರಿ ಸ್ಟಾಲ್‌ಗಳಲ್ಲಿ ಖರೀದಿ ಭರ್ಜರಿಯಾಗಿತ್ತು. ಇದರಿಂದ ಪಟ್ಟಣದಲ್ಲಿ ಎತ್ತ ನೋಡಿದರೂ ಜನ ಸಂಚಾರ ಕಂಡು ಬಂತು.
ಯಾವುದಕ್ಕೆ ಎಷ್ಟು ದರ: ಈ ಭಾಗದಲ್ಲಿ ಬಹುತೇಕ ಜನರು ಗೌರಿ ಗಣೇಶ ಹಬ್ಬದ ವಿಶೇಷವಾಗಿ ಎಳ್ಳಿನಿಂದ ತಿಂಡಿ, ತಿನಿಸು ತಯಾರು ಮಾಡುವುದರಿಂದ ಎಳ್ಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಅಗಾಗಿ ಎಳ್ಳಿನ ಬೆಲೆ ಕೆಜಿಗೆ 180 ರೂ. ಇದ್ದರೆ ಬೆಲ್ಲ 50 ಅಚ್ಚುಗಳ ಒಂದು ಕಟ್ಟಿಗೆ 260 ರೂ. ಇತ್ತು. ವಿವಿಧ ಹಣ್ಣುಗಳ ಬೆಲೆಯೂ ಹೆಚ್ಚಾಗಿತ್ತು. ಕೆ.ಜಿ ದಾಳಿಂಬೆ ಹಾಗೂ ಸೇಬಿಗೆ 150 ರೂ, ದ್ರಾಕ್ಷಿಗೆ 140 ರೂ, ಕಿತ್ತಲೆ 100 ರೂ, ಎಲಕ್ಕಿ ಬಾಳೆ ಹಾಗೂ ಮೂಸಂಬಿ 80 ರೂ. ದರವಿತ್ತು. ಇನ್ನು ಮಲ್ಲಿಗೆ ಮೀಟರ್‌ಗೆ 100 ರೂ, ಮುಲ್ಲೆಗೆ 80 ರೂ, ಕಾಕಡ 70 ರೂ, ಸೇವಂತಿಗೆ 50 ರೂ. ಹೂವಿನ ಧಾರಣೆ ಇತ್ತು. ಇದರ ಜತೆಗೆ ತರಕಾರಿ ಬೆಲೆಯೂ ಸಾಮಾನ್ಯ ದಿನಕ್ಕಿಂತ ಕೊಂಚ ಏರಿಕೆಯಾಗಿತ್ತು.
ಗಣೇಶ ಮೂರ್ತಿಗೆ ಫುಲ್ ಡಿಮ್ಯಾಂಡ್ ! : ಗೌರಿ ಗಣೇಶ ಹಬ್ಬದ ಅಂಗವಾಗಿ ಪ್ರತಿ ಗ್ರಾಮದಲ್ಲೂ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆ ಕಳೆದ 2 ವರ್ಷದಿಂದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅವಕಾಶ ಇರಲಿಲ್ಲ. ಇದರಿಂದ ಕೆಲವರಿಗೆ ಕಳೆದ ವರ್ಷ ಆಸಕ್ತಿಯೂ ಕಡಿಮೆಯಾಗಿತ್ತು. ಇದರಿಂದ ಒಂದು ಕಡೆ ಪ್ರತಿ ವರ್ಷ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದ ಸಮಿತಿಗಳ ಪದಾಧಿಕಾರಿಗಳು, ಗ್ರಾಮಸ್ಥರಲ್ಲಿ ನಿರಾಸೆ ಉಂಟು ಮಾಡಿದ್ದರೆ ಇತ್ತ ಗಣಪ ಮೂರ್ತಿ ತಯಾರಕರಿಗೆ ಮಾರಾಟಗಾರರಿಗೆ ಸಂಪಾದನೆ ಖೋತಾ ಆಗಿತ್ತು. ಆದರೆ, ಈ ಬಾರಿ ಎಲ್ಲೆಡೆ ಮೂರ್ತಿ ಪ್ರತಿಷ್ಠಾಪಿಸುವವರ ಸಂಖ್ಯೆ ಹೆಚ್ಚಿದ್ದು, ಗಣೇಶೋತ್ಸವ ಹೊಸತನದೊಂದಿಗೆ ಸಂಭ್ರಮ ಪಡೆದುಕೊಂಡಿದೆ.
ಈಗಾಗಲೇ ಕಳೆದ ವಾರದ ಹಿಂದೆಯೇ ವಿವಿಧ ರೂಪವುಳ್ಳ ಗಣೇಶಮೂರ್ತಿಗಳು ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದು, ಮಾರಾಟಕ್ಕೆ ಇಡಲಾಗಿದೆ. ಗಣಪತಿ ಪ್ರತಿಷ್ಠಾಪನಾ ಮಂಡಳಿ, ಗ್ರಾಮಸ್ಥರು ಹಾಗೂ ಸಂಘಸಂಸ್ಥೆಯವರು ಖರೀದಿಸಲು ತೊಡಗಿದ್ದರು. ಹಾಗಾಗಿ ಗಣಪತಿ ಮೂರ್ತಿಗೆ ಬೇಡಿಕೆ ಹೆಚ್ಚಾಗಿತ್ತು. ಇದರಿಂದ ಕೊಂಚ ಬೆಲೆಯೂ ಏರಿಕೆಯಾಗಿದ್ದು, 2 -10 ಸಾವಿರ ರೂ. ತನಕ ಗಣಪತಿ ಮೂರ್ತಿಗಳು ಮಾರಾಟವಾದವು.