ನ್ಯೂಸ್

ಹನುಮ ಜಯಂತಿ ಆಚರಣೆಗೆ ಸಿದ್ಧತೆ

ಕುಶಾಲನಗರ : ಕೂಡಿಗೆ, ಮತ್ತು ಕೂಡುಮಂಗಳೂರು ಗ್ರಾಮದ ಹನುಮ ಸೇನಾ ಸಮಿತಿಯ ವತಿಯಿಂದ ಹನುಮ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ಕೂಡುಮಂಗಳೂರು ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ. ಕೆ.ಎಸ್. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಾರ್ಷಿಕ ಸಂಪ್ರದಾಯದಂತೆ ಮುಂದಿನ ತಿಂಗಳು ಹನುಮ ಜಯಂತಿ ಆಚರಣೆ ಮಾಡಲು ಭಕ್ತರ ಸಹಕಾರ ಕೋರಲಾಯಿತು. ಹನುಮ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಮತ್ತು ಕೂಡಿಗೆಯ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ವಾರ್ಷಿಕ ರಥೋತ್ಸವ ಸಂದರ್ಭದ ಭಾಗವಹಿಸುವಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು.
ಕೂಡಿಗೆ, ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದ್ದೂರಿಯಾಗಿ ಜಯಂತಿ, ಉತ್ಸವ ನಡೆಸುವುದು ಸರಿಯಷ್ಟೆ. ಆದರೆ ಎರಡೂ ಗ್ರಾಮಗಳಿಗೆ ಒಂದೇ ಶೋಭಾಯಾತ್ರೆಯ ಹನುಮ ಮಂಟಪವನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡುವ ಚಿಂತನೆಗಳ ಬಗ್ಗೆ ಯುವಕರು ಮತ್ತು ಗ್ರಾಮಸ್ಥರು ಅಭಿಪ್ರಾಯ ಮಂಡಿಸಿದರು.
ಸಭೆಯಲ್ಲಿ ಹಾಜರಿದ್ದ ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅದಕ್ಕೆ ಅನುಗುಣವಾಗಿ ಅದ್ದೂರಿಯ ಶೋಭಾಯಾತ್ರೆ ವಿಗ್ರಹ ಸಿದ್ಧಪಡಿಸುವ, ವಿವಿಧ ಕಾರ್ಯಕ್ರಮ ರೂಪಿಸುವ ಚರ್ಚೆಗಳು ನಡೆದವು. ಕುಶಾಲನಗರ ಹನುಮ ಸೇವಾ ಸಮಿತಿಯ ದಶ ಮಂಟಪಗಳ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಉಪಾಧ್ಯಕ್ಷ ರೀಜೂ, ಕಾರ್ಯದರ್ಶಿ ಮಂಜುನಾಥ, ಸಹ ಕಾರ್ಯದರ್ಶಿ ಕೆ.ಪಿ. ರಾಜು, ಖಜಾಂಚಿ ಧರ್ಮ ಮಾತನಾಡಿದರು.ಸಮಿತಿಯ ಪ್ರಮುಖರಾದ ಕಿಶೋರ್ ಕುಮಾರ್, ಮಧು, ತಿಲಕ್, ಕೇಶವ ರೈ, ಕೆ.ವಿ. ಬಸಪ್ಪ, ಅರುಣ್ ರಾವ್, ಅನಂತ, ಸುನಿಲ್ ರಾವ್, ಕೆ.ಜಿ ಅರುಣ್ ಕುಮಾರ್, ಸುಬ್ಬಯ್ಯ ಸೇರಿದಂತೆ ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಸಂಘಟನೆಯ ಪ್ರಮುಖರು, ಎರಡೂ ಗ್ರಾಮಗಳ ಯುವಕರು ಭಾಗವಹಿಸಿದ್ದರು.