ನ್ಯೂಸ್

ಹನಿಟ್ರಾೃಪ್‌ನಲ್ಲಿ ಡಿಕೆಶಿ ಕೈವಾಡವಿಲ್ಲ

ಹನಿಟ್ರ್ಯಾಪ್ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡ ಇಲ್ಲ. ಇದೆಲ್ಲ ಬಿಜೆಪಿಯವರ ಸುಳ್ಳು ಆರೋಪ. ಈ ಹಿಂದೆ ಬಿಜೆಪಿಯ 17 ಜನ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಹಾಗಾದರೆ ಅವರ ವಿಡಿಯೋ ಬಿಜೆಪಿಯವರೇ ಮಾಡಿಸಿದ್ದ? ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಹಿಂದೆ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂಬ ಬಿಜೆಪಿ ಆರೋಪ ಸಂಬಂಧ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು. ಇದರ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾತ್ರವಿಲ್ಲ. ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.

ದೂರು ನೀಡಲು ಸಚಿವ ಕೆ.ಎನ್. ರಾಜಣ್ಣ ವಿಳಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ಅದನ್ನು ರಾಜಣ್ಣ ಅವರನ್ನೇ ಕೇಳಬೇಕು. ಅವರು ಏನು ಮಾಡಿದರೆ ಒಳ್ಳೆಯದು ಅಂತ ಚರ್ಚೆ ಮಾಡುತ್ತಿದ್ದಾರೆ ಅನ್ನಿಸುತ್ತೆ. ಗೃಹ ಸಚಿವರ ಜತೆ ಮಾತುಕತೆ ನಡೆಸಿದ್ದಾರೆ ಎಂದರು.

ಸಚಿವ ರಾಜಣ್ಣ ಮನೆಯಲ್ಲಿ ಸಿಸಿ ಟಿವಿ ಇಲ್ಲದ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಮನೆಯಲ್ಲಿ ಸಿಸಿ ಟಿವಿ ಇದೆ. ಸಚಿವರ ಮನೆಯಲ್ಲಿ ಸಿಸಿ ಟಿವಿ ಇದಿಯಾ, ಇಲ್ಲವಾ ಎಂಬುದು ಗೊತ್ತಿಲ್ಲ. ಸಿಸಿ ಟಿವಿ ಇದ್ದರೆ ಒಳ್ಳೆಯದು. ಇಲ್ಲಿ ರಾಜಣ್ಣ ಕೂಡ ಟಾರ್ಗೆಟ್ ಆಗಿಲ್ಲ. ಯಾರು ಯಾರನ್ನು ಟಾರ್ಗೆಟ್ ಮಾಡೋಕೆ ಆಗಲ್ಲ. ರಾಜಣ್ಣ ಅವರಿಗೆ ಆದ ಅನುಭವವನ್ನು ಸದನದಲ್ಲಿ ಹೇಳಿದ್ದಾರೆ ಅಷ್ಟೇ. ತನಿಖೆ ನಡೆಯಲಿದ್ದು, ಮುಂದೆ ಸತ್ಯ ಹೊರಬರಲಿದೆ ಎಂದು ಹೇಳಿದರು.