ಚಿತ್ರದುರ್ಗ: ತಾಲೂಕಿನ ಈರಜ್ಜನಹಟ್ಟಿ ಗೇಟ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಹರಿದು ಕುರಿಗಾಹಿಯೊಬ್ಬರು ಆಸ್ಪತ್ರೆಯಲ್ಲಿ, 10ಕ್ಕೂ ಅಧಿಕ ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಸೋಮವಾರ ನಸುಕಿನಲ್ಲಿ ಸಂಭವಿಸಿದೆ. ಚಳ್ಳಕೆರೆ ತಾಲೂಕಿನ ನೇಲಗೇತನಹಟ್ಟಿಯ ರಾಜಯ್ಯ (35) ಮೃತ ವ್ಯಕ್ತಿ.
ಘಟನೆ ಹಿನ್ನೆಲೆ: ಕುರಿಗಾಹಿಗಳಾದ ದೊಡ್ಡಜ್ಜ, ಬಿಂದಾಸ್, ರಾಜಯ್ಯ, ತಿಪ್ಪಯ್ಯ ನಾಲ್ವರು ಕುರಿಗಳಿಗೆ ಮೇವು ಸಿಗದ ಕಾರಣ ಜಿಲ್ಲೆಯ ಚಳ್ಳಕೆರೆಯಿಂದ ಚನ್ನಗಿರಿವರೆಗೂ ಗುಳೆ ಹೋಗಿದ್ದರು. ಮತ್ತೆ ಅಲ್ಲಿಂದ ಕುರಿಗಳೊಂದಿಗೆ ಊರಿಗೆ ಹಿಂದಿರುಗುತ್ತಿದ್ದರು.
ಭಾನುವಾರ ರಾತ್ರಿ ಈರಜ್ಜನಹಟ್ಟಿ ಗ್ರಾಮದಲ್ಲಿ ತಂಗಿದ್ದು, ಸೋಮವಾರ ಮುಂಜಾನೆ 3.30ರ ವೇಳೆಗೆ ಪಯಣ ಮುಂದುವರಿಸಿದ್ದರು. ನಿತ್ಯ ಧರ್ಮಸ್ಥಳ-ಹಗರಿಬೊಮ್ಮೆನಹಳ್ಳಿ ಮಾರ್ಗವಾಗಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್, ಎಡಬದಿಯಲ್ಲಿ ಸಂಚರಿಸುತ್ತಿದ್ದ ಕುರಿಗಾಹಿಗಳ ಮೇಲೆ ಹರಿದಿದ್ದು, 10ಕ್ಕೂ ಅಧಿಕ ಕುರಿಗಳು ಸ್ಥಳದಲ್ಲೇ ಮೃತಪಟ್ಟು, ರಾಜಯ್ಯ ಎಂಬುವವರಿಗೆ ತೀವ್ರ ಸ್ವರೂಪದ ಪೆಟ್ಟುಗಳಾಗಿದ್ದವು.
ಕೂಡಲೇ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ, ನಂತರ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ತಿಪ್ಪಯ್ಯ ಎಂಬುವವರಿಗೂ ಹೆಚ್ಚು ಪೆಟ್ಟು ಬಿದ್ದಿದೆ.
ಘಟನೆಯಿಂದಾಗಿ ಎಂಟ್ಹತ್ತು ಕುರಿಗಳ ಕಾಲುಗಳು ಮುರಿದು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಇಲಾಖೆ ವೈದ್ಯರು ಪೆಟ್ಟಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಕುರಿಗಳಿಗೆ ಚಿಕಿತ್ಸೆ ನೀಡಿದರು.