ವೇಮಗಲ್: ಮದ್ಯಪಾನಕ್ಕೆ ಹಣ ಕೊಡಲು ನಿರಾಕರಿಸಿದ ಪತ್ನಿಯನ್ನು ಪತಿಯೇ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದು ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ನಿವಾಸಿ ವಿಜಯಲಕ್ಷ್ಮೀ (30) ಮೃತೆ. ಮೂರು ದಿನದ ಹಿಂದೆ ವಿಜಯಲಕ್ಷ್ಮೀ ಸ್ತ್ರೀಶಕ್ತಿ ಸಂಘದಲ್ಲಿ 10,000 ರೂ. ಸಾಲ ಪಡೆದು ಮನೆಯಲ್ಲಿ ಇಟ್ಟಿದ್ದರು. ಇದನ್ನು ನೋಡಿದ ಪತಿ ಸೋಮಶೇಖರ್ ಹಣ ನೀಡುವಂತೆ ಪೀಡಿಸುತ್ತಿದ್ದ. ವಿಜಯಲಕ್ಷ್ಮೀ ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿದ್ದ ಸುತ್ತಿಗೆಯಿಂದ ತಲೆಗೆ ಹೊಡೆದು 10,000 ರೂ. ದೋಚಿದ್ದಾನೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ವಿಜಯಲಕ್ಷ್ಮೀ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಪಕ್ಕದ ಮನೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ವಿಜಯಲಕ್ಷ್ಮೀ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬಂದ ವಿಜಯಕ್ಷ್ಮೀ ಕುಟುಂಬಸ್ಥರು ಸೋಮಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಗಳ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.