ಮೈಸೂರು; ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಎಳನೀರು ವ್ಯಾಪಾರಿ ಹೈಟೆನ್ಷನ್ ವಿದ್ಯುತ್ ಕಂಬವನ್ನು ಏರಿ ಕುಳಿತ ಸಿನಿಮೀಯ ಘಟನೆ ನಗರದಲ್ಲಿ ನಡೆದಿದೆ.
ನಗರದ ವಿಶ್ವಮಾನವ ಜೋಡಿ ರಸ್ತೆಯ ರಾಮಕೃಷ್ಣ ವೃತ್ತದ ಬಳಿ ಇದು ಜರುಗಿದೆ. ಎಳನೀರು ವ್ಯಾಪಾರಿ ವೆಂಕಟೇಶ್ ಕಂಬ ಏರಿದ ಆಸಾಮಿ. ಎಳನೀರು ಮಾರಾಟ ಮಾಡುವ ಸ್ಥಳದಲ್ಲಿ ಸೈಕಲ್ ಸಂಚಾರಕ್ಕೆ ಅಳವಡಿಸಲಾದ ‘ಟ್ರಾಫಿಕ್ ಸೇಫ್ಟಿ ಪೋಲ್’ಗಳನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ.
ಇದನ್ನು ನಾನೇ ಕಿತ್ತು ಹಾಕಿರುವುದಾಗಿ ಎಂದು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ವೆಂಕಟೇಶ್, 10 ಅಡಿ ಎತ್ತರದವರೆಗೂ ಕಂಬ ಏರಿ ಕುಳಿತಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನವೊಲಿಸಿ ಕೆಳಗಿಳಿಸಿ ಕಳುಹಿಸಿದ್ದಾರೆ.
ವೆಂಕಟೇಶ್ ಎಳನೀರು ಮಾರಾಟ ಮಾಡುವ ಸ್ಥಳದಲ್ಲೇ ಸುಮಾರು 15 ‘ಟ್ರಾಫಿಕ್ ಸೇಫ್ಟಿ ಪೋಲ್’ಗಳನ್ನು ಕಿತ್ತು ಹಾಕಲಾಗಿದೆ. ಈ ಸಂಬಂಧ ಸಂಚಾರ ಪೊಲೀಸರು ವಿಚಾರಿಸಿದ್ದರು. ಇದನ್ನೇ ನೆಪ ಮಾಡಿಕೊಂಡು ಈತ ಹೆಟೆನ್ಷನ್ ವಿದ್ಯುತ್ ಕಂಬ ಏರಿದ್ದಾನೆ ಎಂದು ಕುವೆಂಪು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.