ನ್ಯೂಸ್

ಹಕ್ಕುಪತ್ರಕ್ಕಾಗಿ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗ ಧರಣಿ

ಕೈಲಾಂಚ :  ಹಕ್ಕುಪತ್ರ ನೀಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಧರಣಿ ಮುಂದುವರಿಸಿದರು.

ವಡ್ಡರಹಳ್ಳಿಯ ಗೊಲ್ಲರದೊಡ್ಡಿಯ ಪಕ್ಕದಲ್ಲೇ ಹಂದಿಗೊಂದಿ ಅರಣ್ಯ ಪ್ರದೇಶವಿದೆ. ಹಲವು ವರ್ಷಗಳ ಹಿಂದೆ ಅರಣ್ಯವಾಸಿಗಳಾದ ನಮ್ಮನ್ನು ಒಕ್ಕಲೆಬ್ಬಿಸಿದ್ದಾರೆ. ಈಗ ಜಮೀನು ಇಲ್ಲ ನಮಗೆ ಅನ್ಯಾಯವಾಗಿದೆ. ಹಕ್ಕುಪತ್ರ ವಿತರಿಸಿ ನ್ಯಾಯ ಒದಗಿಸಿಕೊಂಡಿ ಎಂದು ಆಗ್ರಹಿಸಿದರು.

2006 ಅರಣ್ಯಹಕ್ಕು ಕಾಯ್ದೆ ಅನ್ವಯ ಅರಣ್ಯದಲ್ಲಿ ಕೃಷಿ ಮಾಡುತ್ತಿದ್ದ, ವಾಸವಿದ್ದ ಜಾಗವನ್ನು ನೀಡಬೇಕು ಎಂದು 16 ಕುಟುಂಬಗಳು ಆಗ್ರಹಿಸುತ್ತಿವೆ. ಆದರೂ ಪ್ರಯೋಜನವಿಲ್ಲದಂತಾಗಿದೆ.

ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಉಪವಿಭಾಗಾಧಿಕಾರಿಗಳಿಗೆ ಜಾಗ ಗುರುತಿಸಿ ನೀಡಬೇಕೆಂದು ಮನವಿ ಸಲ್ಲಿಸಿದ್ದರಿಂದ ಉಪವಿಭಾಗಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ, ಕಂದಾಯ, ಗ್ರಾಪಂ, ಅರಣ್ಯ, ಪಂಚಾಯತ್ ರಾಜ್ ಇಲಾಖೆ, ಅರಣ್ಯ ಹಕ್ಕು ಸಮಿತಿಗೆ ಖುದ್ದಾಗಿ 23ರಂದು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಅನುಪಾಲನಾ ವರದಿ ನೀಡುವಂತೆ ತಿಳಿಸಿದ್ದರು.

ಆದರೆ ಗ್ರಾಪಂ ಪಿಡಿಒ ಸತೀಶ್, ಮತ್ತು ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್ ಮಾತ್ರ ಬಂದು ಬೇರೆ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಗೈರಾಗಿದ್ದರಿಂದ ಕುಪಿತಗೊಂಡ ಗ್ರಾಮಸ್ಥರು ಪದೇಪದೆ ಇದೇ ರೀತಿ ಅನ್ಯಾಯವಾಗುತ್ತಿದೆ. ಈಗಾಗಲೇ ಹಲವಾರು ಭಾರಿ ಮನವಿ ಮಾಡಿದರೂ ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿವೆ.

ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿ ನ್ಯಾಯುತವಾಗಿ ಸಿಗಬೇಕಾದ ಹಕ್ಕುಪತ್ರ ನೀಡಬೇಕು ಧರಣಿ ನಿರತರರು ಒತ್ತಾಯಿಸಿದರು.ಇರುಳಿಗ ಸಮಾಜದ ಮಹದೇವಯ್ಯ, ಜೆ.ಎನ್. ಶಿವರಾಜು, ಲಕ್ಷ್ಮಮ್ಮ, ದೇವಯ್ಯ, ನವಣಯ್ಯ, ಮಹದೇವಮ್ಮ, ಶಿವಮಾದಮ್ಮ, ಈರಮ್ಮ, ಮಾದಮ್ಮ ಮುಂತಾದವರಿದ್ದರು.

ಹಂದಿಗೊಂದಿ ಮೀಸಲು ಅರಣ್ಯ ಪ್ರದೇಶವಾಗಿದ್ದು, ಗೊಲ್ಲರದೊಡ್ಡಿಯ ನಿವಾಸಿಗಳು ಹೇಳುವಂತೆ ಅರಣ್ಯಹಕ್ಕು ಕಾಯ್ದೆಯಿಂದ ಒಳಪಡುವ ಮಾನ್ಯಮಾಡುವ ಅವರ ಪೂರಕ ದಾಖಲೆಗಳು ಇಲ್ಲದಿರುವುದರಿಂದ ಅರಣ್ಯ ಇಲಾಖೆ ಈಗಾಗಲೇ ಅರಣ್ಯ ಹಕ್ಕು ಸಮಿತಿ ಮುಂದೆ ಲಿಖಿತ ವರದಿ ನೀಡಿದೆ. ಎ. ಕಿರಣ್‌ಕುಮಾರ್ ವಲಯ ಅರಣ್ಯ ಅಧಿಕಾರಿ ಹಿರಿಯ ಶ್ರೇಣಿ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಿಲ್ಲ ಪದೇ ಪದೇ ನಮಗೆ ಅನ್ಯಾಯವಾಗುತ್ತಿದೆ. ಹಕ್ಕುಪತ್ರ ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಇಲ್ಲೇ ಪ್ರತಿಭಟನೆ ನಡೆಸುತ್ತೇವೆ. ಸಮಾಜ ಕಲ್ಯಾಣ ಅಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಲಿಖಿತ ರೂಪದಲ್ಲಿ ನೀಡಿದರೆ ನಾವು ಕಾನೂನಿನ ಮೊರೆಹೋಗುತ್ತೇವೆ. ಆದರೆ, ಅಧಿಕಾರಿಗಳು ಮಾತ್ರ ಪದೇ ಪದೇ ಕಣ್ಣೊರೆಸುವ ತಂತ್ರ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಕೃಷ್ಣಮೂರ್ತಿ ಇರುಳಿಗ ಸಮಾಜದ ಮುಖಂಡರು, ವಡ್ಡರಹಳ್ಳಿ ಗೊಲ್ಲರದೊಡ್ಡಿ.