ತರೀಕೆರೆ ತಾಪಂನಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಡಾ. ಕೆ.ಜೆ.ಕಾಂತರಾಜ್, ವಿಶ್ವಜಿತ ಮೆಹತಾ, ಶಿವಶರಣಪ್ಪ ಕಟ್ಟೋಳಿ, ಡಾ. ಆರ್.ದೇವೇಂದ್ರಪ್ಪ, ಎಂ.ಕೆ.ವಿಜಯಕುಮಾರ್ ಇತರರಿದ್ದರು. 
ನ್ಯೂಸ್

ಹಕ್ಕುಪತ್ರ ವಿತರಣೆಗೆ ತಯಾರಿ ನಡೆಸಿ

ತರೀಕೆರೆ: ತಾಲೂಕಿನ ವಿವಿಧ ಕಡೆಯಿಂದ ಬಂದಿರುವ 94 ಸಿ ಮತ್ತು 94 ಸಿಸಿಗೆ ಸಂಬಂಧಿಸಿದ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ಅರ್ಹರಿಗೆ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಿ ಎಂದು ಎಸಿ ಡಾ. ಕೆ.ಜೆ.ಕಾಂತರಾಜ್ ಅವರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಇಟ್ಟಿಗೆ, ಪಿರಮೇನಹಳ್ಳಿ, ನಂದಿಬಟ್ಟಲು ಕಾಲನಿ ಸೇರಿ 30ಕ್ಕೂ ಹೆಚ್ಚು ಕಡೆ ಉಪಗ್ರಾಮ ರಚನೆ ಜತೆ ಗ್ರಾಮಠಾಣಾ ವಿಸ್ತರಣೆಗೆ ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.

ಹಕ್ಕುಪತ್ರ ಸಿಗದೆ ತೀವ್ರ ತೊಂದರೆಯಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತುರ್ತು ಕ್ರಮಕೈಗೊಳ್ಳಬೇಕು. ವಿವಿಧ ಕಡೆ ಒತ್ತುವರಿಯಾಗಿರುವ ಗ್ರಾಮ ಠಾಣಾ ಜಾಗ ಶೀಘ್ರ ತೆರವುಗೊಳಿಸಬೇಕೆಂದು ಇಒ ಡಾ. ಆರ್.ದೇವೇಂದ್ರ ಅವರಿಗೆ ನಿರ್ದೇಶನ ನೀಡಿದರು.

ಸರ್ಕಾರದ ಅಭಿವೃದ್ಧಿ ಕಾರ್ಯಗಳ ಜತೆ ಅರಣ್ಯ ಇಲಾಖೆ ಅಂಚಿನಲ್ಲಿ ನೆಲೆಸಿರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಅಡ್ಡಿಯಾಗಿರುವ ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ರಸ್ತೆ ಬದಿ ಅರಣ್ಯೀಕರಣಕ್ಕೆ ಯೋಜನೆ ರೂಪಿಸಬೇಕು ಎಂದು ಆರ್‌ಎಫ್‌ಒ ಆಸೀಪ್ ಅಹಮದ್ ಅವರಿಗೆ ಸೂಚಿಸಿದರು.

ತರೀಕೆರೆ ಶೈಕ್ಷಣಿಕ ವಲಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಲಭಿಸಿಲ್ಲ. ಈ ಬಾರಿಯೂ ಹೀಗಾದರೆ ಸಹಿಸಲ್ಲ. ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂದು ಬಿಇಒ ಪರಶುರಾಮಪ್ಪ ಅವರಿಗೆ ಖಡಕ್ ಸೂಚನೆ ನೀಡಿದರು.

ಮೆಸ್ಕಾಂ ಎಇಇ ಮಂಜುನಾಥ್ ಮಾತನಾಡಿ, ಪಿರಮೇನಹಳ್ಳಿ, ಬೇಲೇನಹಳ್ಳಿ ನಡುವಿನಲ್ಲಿ ಪವರ್ ಗ್ರಿಡ್ ಸ್ಥಾಪನೆಗೆ ಜಾಗ ಗುರುತಿಸಿಕೊಡಬೇಕೆಂದು ಸಭೆಗೆ ಮನವಿ ಮಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಮಾತನಾಡಿ, ತಾಲೂಕಿನ ವಿವಿಧೆಡೆ ಪತ್ತೆಯಾಗಿದ್ದ 72 ಡೆಂಘೆ ಪ್ರಕರಣಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖಪಡಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲಿಸಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಪಟ್ಟಣದ ಐದು ಕಡೆ ಸೇರಿ ತಾಲೂಕಿನ ಕರಕುಚ್ಚಿ, ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಾಡಿಗೆ ಕಟ್ಟಡದಲ್ಲಿ ಕಾಯನಿರ್ವಹಿಸುತ್ತಿವೆ. ಅಲ್ಲದೇ 4 ಹೊಸ ಕಟ್ಟಡಕ್ಕೆ ಅನುಮೋದನೆ ದೊರೆತಿದೆ. ಹೊಸದಾಗಿ ಅನುಮೋದನೆಯಾಗಿರುವ ಜತೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದ್ದು, ಸೂಕ್ತ ಜಾಗ ಗುರುತಿಸಿ ಕೊಡಬೇಕು ಎಂದು ತಹಸೀಲ್ದಾರ್ ವಿಶ್ವಜಿತ ಮೆಹತಾ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಅವರಿಗೆ ನಿರ್ದೇಶನ ನೀಡಿದರು.

ಅಜ್ಜಂಪುರ ಹಾಗೂ ತರೀಕೆರೆ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆ, ಕರ್ನಾಟಕ ನೀರಾವರಿ ನಿಗಮದ ಜತೆ ಗ್ರಾಪಂಗಳಿಗೆ ಸೇರಿದ ನೂರಾರು ಕೆರೆ, ಕಟ್ಟೆಗಳಿದ್ದು, ಬಹುತೇಕ ಕೆರೆಯಂಗಳ ಒತ್ತುವರಿಯಾಗಿವೆ. ಸರ್ವೇ ಮಾಡಿ ಗಡಿ ಗುರುತಿಸಿ ಜಾಗ ಒತ್ತುವರಿ ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಸಣ್ಣ ನೀರಾವರಿ ಇಲಾಖೆ ಎಇಇ ಭರತ್ ಅವರಿಗೆ ತಿಳಿಸಿದರು.

ಎಸಿ ಡಾ. ಕೆ.ಜೆ.ಕಾಂತರಾಜ್, ಅಜ್ಜಂಪುರ ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಎಂ.ವಿಜಯಕುಮಾರ್, ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಜಿ.ಎಸ್.ರಚನಾ, ಗಂಗಾಧರ್, ಎಚ್.ಎಂ.ಮಂಜುನಾಥ್, ಮಲ್ಲಿಕಾರ್ಜುನ, ಮೆಹಬೂಬ್ ಇತರರರಿದ್ದರು.