ನ್ಯೂಸ್

ಹಕ್ಕುಗಳನ್ನು ಪಡೆಯಲು ಹೊಸ ಹೊಸ ಹೋರಾಟ ರೂಪಿಸಿ

ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾದರೆ ಹೊಸ ಹೊಸ ಹೋರಾಟಗಳನ್ನು ರೂಪಿಸಬೇಕಿದೆ ಎಂದು ಎಐಟಿಯುಸಿ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ ಸಲಹೆ ನೀಡಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಐಸಿಸಿಟಿಯು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದ ಕಾರ್ಮಿಕರ ದಿನಾಚರಣೆ ಪ್ರಯುಕ್ತ ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ಮೇ ದಿನಾಚರಣೆ ಮತ್ತು ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವ್ಯಾಪಾರ ಸ್ನೇಹಿ ನಾಲ್ಕು ಲೇಬರ್ ಕೋಡ್, ಕಾರ್ಮಿಕರ ಕಾನೂನುಗಳನ್ನು ನೆಲಸಮ ಮಾಡಿದಂತಾಗಿದೆ ಎಂದರು.

ಕಾರ್ಮಿಕ ಕಾಯ್ದೆಯಿಂದ ಕಾರ್ಮಿಕರ ಪರವಾದ ಕಾನೂನುಗಳು ನೆಲಸಮವಾಗಲಿದ್ದು, ಈ ಕಾಯ್ದೆಯಿಂದ ಕಾರ್ಮಿಕ ಸಂಘಟನೆ ಹಾಗೂ ಪ್ರಜಾತಾಂತ್ರಿಕ ಹಕ್ಕುಗಳನ್ನು ದಮನ ಮಾಡುತ್ತ, ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ. ಅಮೆರಿಕದಲ್ಲಿ 1886ರಲ್ಲಿ ಕಾರ್ಮಿಕರಿಗೆ 8 ಗಂಟೆ ಕೆಲಸ ಹಾಗೂ ಇತರ ಸೌಲಭ್ಯಗಳನ್ನು ನೀಡುವಂತೆ ದೊಡ್ಡ ಮಟ್ಟದ ಹೋರಾಟ ಮಾಡಲಾಯಿತು. ಅದರ ಪ್ರಭಾವದಿಂದ ಕಾರ್ಮಿಕರಿಗೆ ಅನುಕೂಲವಾಯಿತು. ಆದರೆ, ಇತ್ತೀಚಿನ ದಿನಗಳಲ್ಲಿ ಕಾರ್ಮಿಕರು ತಮ್ಮ ಮೂಲ ಸೌಕರ್ಯಕ್ಕಾಗಿಯೇ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ, ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳುತ್ತಿವೆ. ಆದರೆ, ನಿಜವಾದ ಕಾರ್ಮಿಕರರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತದೆ. ಗುತ್ತಿಗೆ-ಹೊರಗುತ್ತಿಗೆ ಪದ್ಧತಿ ಹೆಸರಿನಲ್ಲಿ ಕನಿಷ್ಠ ವೇತನ, ಪಿಎಫ್, ಇಎಸ್‌ಐ ರಜೆ ಮುಂತಾದ ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ, ಕೇಂದ್ರ ಸರ್ಕಾರದ ವಿರುದ್ಧ ಮೇ 20ರಂದು ದೇಶವ್ಯಾಪ್ತಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಕಾರ್ಮಿಕರು ಪಾಲ್ಗೊಂಡು, ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. ಕಾರ್ಮಿಕರು ಸಂಘಟಕರಾದರೆ ಹೋದಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಿಐಟಿಯು ಕಾರ್ಯದರ್ಶಿ ಬಾಲಾಜಿರಾವ್, ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಪ್ರಮೋದಾದೇವಿ, ಎಐಸಿಸಿಟಿಯು ಜಿಲ್ಲಾಧ್ಯಕ್ಷ ಚೌಡಳ್ಳಿ ಜವರಪ್ಪ, ಜೆಸಿಟಿಯು ಸಂಚಾಲಕ ಎನ್.ಕೆ.ದೇವದಾಸ್, ಡಿ. ಜಗನ್ನಾಥ್, ಅಣ್ಣಪ್ಪ, ಯಶೋದರಾ, ಚಂದಾವರೆ ಮತ್ತಿತರರಿದ್ದರು.

ಮೆರವಣಿಗೆ: ಸಮಾವೇಶಕ್ಕೂ ಮೊದಲು ನಗರದ ಗಾಂಧಿ ವೃತ್ತದಿಂದ ಆರಂಭವಾದ ಕಾರ್ಮಿಕರ ಮೆರವಣಿಗೆ ಕೆ.ಟಿ. ಸ್ಟ್ರೀಟ್, ಇರ್ವಿನ್ ರಸ್ತೆ, ನ್ಯೂ ಸಯ್ಯಜಿರಾವ್ ರಸ್ತೆ, ಹಳೇ ಬ್ಯಾಂಕ್ ರಸ್ತೆ ಮೂಲಕ ಸಾಗಿ ಮತ್ತೆ ಗಾಂಧಿ ವೃತ್ತಕ್ಕೆ ವಾಪಸ್ ಬಂದಿತು.

ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಸದಸ್ಯರು ಮತ್ತು ಕಾರ್ಮಿಕರು ಪಾಲ್ಗೊಂಡಿದ್ದರು.